

ಕೆ.ಎಂ.ದೊಡ್ಡಿ: ನಮ್ಮ ಅನುದಾನದಲ್ಲಿ ನಡೆದ ಕಾಮಗಾರಿಯಲ್ಲಿ ಯಾವುದೇ ಗುತ್ತಿಗೆದಾರನಿಂದ ಬಿಡಿಗಾಸು ಕೇಳುವುದಿಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಗುಣಮಟ್ಟದ ಕಾಮಗಾರಿಯಷ್ಟೇ ಮುಖ್ಯ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.
ಸಮೀಪದ ಎಚ್.ಹೊಸೂರು ಗ್ರಾಮದ ಶ್ರೀ ಕಾಳಮ್ಮ ದೇವಾಲಯದ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ನಾನು ಯಾವುದೇ ಕೆಲಸಕ್ಕೂ ಲಂಚ ಪಡೆಯುವುದಿಲ್ಲ. ಅದರ ಅವಶ್ಯಕತೆ ನನಗಿಲ್ಲ ಎಂದರು.
ರಾಜಕೀಯ ವಿಚಾರಗಳನ್ನು ಚುನಾವಣಾ ಸಂದರ್ಭ ಬಳಸಿಕೊಳ್ಳಿ. ರಾಜಕೀಯದಲ್ಲಿ ಸ್ಥಾನಮಾನ ಗಳಿಸಲು ಹಣೆಬರಹ ಬೇಕಷ್ಟೆ. ಹಣೆಬರಹ ಇದ್ದರೆ ಅಧಿಕಾರ ಸಿಗುತ್ತದೆ. ನಾನು ನನ್ನ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಪ್ರಸಕ್ತ ವರ್ಷ 5 ಲಕ್ಷ ರೂ. ಅನುದಾನ ನೀಡಿದ್ದು, ಇನ್ನು 10 ರಿಂದ 15 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಪ್ರಸ್ತುತ ದಿನಗಳಲ್ಲಿ ಸಾಮಾನ್ಯ ಜನ ರಾಜಕೀಯ ಪಕ್ಷಗಳನ್ನು ಗಮನಿಸುವುದು ಕಡಿಮೆ. ಯಾವ ಜನಪ್ರತಿನಿಧಿ ತಮ್ಮ ಅಧಿಕಾರಾವಧಿಯಲ್ಲಿ ಏನನ್ನು ಅಭಿವೃದ್ಧಿ ಮಾಡಿದ್ದಾರೆ. ಆತ ಶುದ್ಧ ಹಸ್ತನೇ ಎಂಬುವುದನ್ನು ಗಮನಿಸುತ್ತಾರೆ. ನಾವು ಮಾಡುವ ಕೆಲಸ ಗ್ರಾಮಗಳಲ್ಲಿ ಸಾಕ್ಷಿಗುಡ್ಡೆಯಾಗಿ ರೂಪುಕೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಮಸ್ಥರೊಂದಿಗೆ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸುತ್ತೇನೆ ಎಂದರು.
ಈ ವೇಳೆ ಗ್ರಾಮದ ಶ್ರೀ ಕಾಳಮ್ಮ ದೇವಾಲಯ ಅಭಿವೃದ್ಧಿಗೆ ನಿವೇಶನ ನೀಡಿದ ದೇವಮ್ಮ ಮರಿಸ್ವಾಮಿ ದಂಪತಿ ಕಾರ್ಯಕ್ಕೆ ಮೆಚ್ಚುಗೆವ್ಯಕ್ತಪಡಿಸಿದ ಮಧು ಜಿ.ಮಾದೇಗೌಡ, ದಂಪತಿಯನ್ನು ಅಭಿನಂದಿಸಿದರು.
ಕಾವೇರಿ ನೀರಾವರಿ ನಿಗಮದ ನಿವೃತ್ತ ಇಇ ಹಾಗಲಹಳ್ಳಿ ಬಸವರಾಜೇಗೌಡ, ತಾ.ಪಂ. ಮಾಜಿ ಸದಸ್ಯರಾದ ಬಿ.ಗಿರೀಶ್, ಭರತೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಎಚ್.ಹೊಸುರು ಮಹೇಶ್, ಮುಖಂಡರಾದ ಆರ್.ಸಿದ್ದಪ್ಪ, ಸ್ವರೂಪ್ ಚಂದ್ರ, ಹಾಗಲಹಳ್ಳಿ ಪುಟ್ಟಸ್ವಾಮಿ, ಅನಿಲ್‌ಕುಮಾರ್, ಗ್ರಾಮದ ಯಜಮಾನರಾದ ನಾಡಗೌಡ ಬಸವರಾಜು, ಶಿವರಾಮು, ಸಿದ್ದಸ್ವಾಮಿ, ಶ್ರೀನಿವಾಸ್, ಈರೇಗೌಡ, ಕರೀಗೌಡ, ರಮೇಶ್, ರಾಜೇಂದ್ರ, ಸಿದ್ದರಾಜು ಇದ್ದರು.