

ಕುಂದಾಪುರ: ಗುಣಮಟ್ಟದ ಶಿಕ್ಷಣ, ಸರ್ಕಾರಿ ಶಾಲೆಗೆ ಮೂಲಸೌಕರ್ಯ ಒದಗಿಸುವುದು ಕರ್ನಾಟಕ ರಾಜ್ಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಸಮನ್ವಯ ಕೇಂದ್ರದ ಉದ್ದೇಶವಾಗಿದೆ ಎಂದು ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಹೇಳಿದರು.
ಶಾಲಾಭಿವೃದ್ಧಿ ಸಮಿತಿ (ಎಸ್ಡಿಎಂಸಿ) ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಉಡುಪಿ ಜಿಲ್ಲೆ ವತಿಯಿಂದ ರಸ್ತೆ ಸುರಕ್ಷತೆ ಬಗ್ಗೆ ಹಮ್ಮಿಕೊಂಡ ವಿಭಿನ್ನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ ಉಡುಪಿ ಜಿಲ್ಲಾದ್ಯಂತ 675 ಶಾಲೆಗಳ ಎಸ್ಡಿಎಂಸಿಗೆ ಮಾಹಿತಿ ನೀಡಿದ್ದು, ಪ್ರತಿ ಶಾಲೆ ಸಮೀಪದ ಹಂಪ್ಸ್ಗಳಿಗೆ ಬಣ್ಣ ಬಳಿಯುವ ಕಾರ್ಯ ಆಯಾಯ ಶಾಲೆ ಎಸ್ಡಿಎಂಸಿ, ಪೋಷಕರು ಹಾಗೂ ಸ್ಥಳೀಯರ ಮುತುವರ್ಜಿಯಲ್ಲಿ ನಡೆಯಲಿದೆ. ಮಕ್ಕಳ ಹಾಗೂ ವಾಹನ ಸವಾರರ ಸುರಕ್ಷತೆ ನಿಟ್ಟಿನಲ್ಲಿ ಈ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕುಂದಾಪುರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಎದುರು ಭಾಗದ ಹಂಪ್ಗೆ ಬಣ್ಣ ಬಳಿಯುವ ಮೂಲಕ ಕುಂದಾಪುರ ಸಂಚಾರ ಠಾಣೆ ಪಿಎಸ್ಸೈ ಪ್ರಸಾದ್ ಕುಮಾರ್ ಕೆ., ಹೆಡ್ ಕಾನ್ಸ್ಟೆಬಲ್ ಪ್ರಶಾಂತ್ ಪೂಜಾರಿ ಚಾಲನೆ ನೀಡಿದರು.
ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಕುಂದಾಪುರ ತಾಲೂಕು ಅಧ್ಯಕ್ಷ ಎಸ್.ವಿ.ನಾಗರಾಜ್, ಪುರಸಭೆ ಘಟಕ ಅಧ್ಯಕ್ಷ ಅಶ್ವಥ್ ಕುಮಾರ್, ಬೈಂದೂರು ತಾಲೂಕು ಅಧ್ಯಕ್ಷ ಸಾದಿಕ್ ಮಾವಿನಕಟ್ಟೆ, ಕಾಪು ತಾಲೂಕು ಉಸ್ತುವಾರಿ ಅಶ್ಪಕ್ ಮೊದಲಾದವರಿದ್ದರು.