

ದೊಡ್ಡಬಳ್ಳಾಪುರ : ತಾಲೂಕಿನಲ್ಲಿ ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮಕ್ಕಳು ಮತ್ತು ಗರ್ಭಿಣಿಯರು ಸೇರಿ 15 ಸಾವಿರ ಮಂದಿ ಫಲಾನುಭವಿಗಳಿದ್ದಾರೆ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು. ನಗರದ ಡಾ.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ಪಂಚಾಯಿತಿ ಮತ್ತು ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಾಲೂಕು ಮಟ್ಟದ ಪೋಷಣ್ ಮಾಸಾಚರಣೆಯಲ್ಲಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಕ್ಲಸ್ಟರ್ ವಾರು ಸಭೆಗಳನ್ನು ಮಾಡಿ ಸಮಸ್ಯೆ ಬಗೆಹರಿಸಲಾಗುವುದು, 8 ನೂತನ ಅಂಗನವಾಡಿ ಕೇಂದ್ರ ನಿರ್ಮಿಸಲಾಗಿದೆ. ಬಾಕಿಯಿದ್ದ ಕೇಂದ್ರಗಳ ಖಾತೆಗಳನ್ನು ಮಾಡಲಾಗಿದೆ. ಕಾಂಪೌಂಡ್ಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣ ಅಧಿಕಾರಿ ರಮೇಶ್ ಮಾತನಾಡಿ 920 ಅಂಗನವಾಡಿ ಕೇಂದ್ರಗಳಿಗೆ ಎಲ್ಇಡಿ ಟಿವಿಗಳು ಬಂದಿವೆ. ಮುಂದಿನ ದಿನಗಳಲ್ಲಿ ಫ್ರಿಡ್ಜ್ ಗಳು ಬರಲಿವೆ. ನಮ್ಮ ದೇಶದಲ್ಲಿನ ಶಿಶುಮರಣ, ತಾಯಿಯಂದಿರ ಮರಣ, ಅಪೌಷ್ಟಿಕತೆ ಹೋಗಲಾಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಗರ್ಭಿಣಿಯರು ಮತ್ತು ಬಾಣಾಂತಿಯರ ಆರೈಕೆಗೆ ಆಶಾ ಕಾರ್ಯಕರ್ತರು ಕಟಿಬದ್ಧರಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳನ್ನು ತಲುಪಿಸಬೇಕು ಎಂದರು.