

ಕೆರೂರ: ಸಾರ್ವಜನಿಕರಿಗೆ ವಿವಿಧ ಯೋಜನೆ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿ, ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡಿಸಲಾಗಿದೆ ಎಂದು ಅಧ್ಯಕ್ಷೆ ನಿರ್ಮಲಾ ಮದಿ ಹೇಳಿದರು.
ಸ್ಥಳೀಯ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಪಂ ಮುಖ್ಯಾಧಿಕಾರಿ ರಮೇಶ ಮಾಡಬಾಳ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಪಂಚಾಯಿತಿಯ ವಿವಿಧ ಆದಾಯ ಮೂಲಗಳಿಂದ 18.13 ಕೋಟಿ ರೂ.ಆದಾಯ ನಿರೀಕ್ಷಿಸಿ, ವಿವಿಧ ಕಾರ್ಯಗಳಿಗೆ 18.9 ಕೋಟಿ ರೂ. ಖರ್ಚಿನ ಬಗ್ಗೆ ಅಂದಾಜು ಮಾಡಲಾಗಿದೆ ಎಂದರು.
ಬಜೆಟ್‌ನಲ್ಲಿ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರು, ಶೌಚಗೃಹ, ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಪಟ್ಟಣದ ಅಭಿವೃದ್ಧಿಗೆ ಹಾಗೂ ಪಂಚಾಯಿತಿಯ ಆರ್ಥಿಕ ಬೆಳವಣಿಗೆ, ಸದಸ್ಯರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಪಪಂ ಸದಸ್ಯ ಪ್ರಮೋದ ಪೂಜಾರ ಮಾತನಾಡಿ, ಪಟ್ಟಣದಲ್ಲಿ ಸಾರ್ವಜನಿಕ ಶೌಚಗೃಹಗಳಿಲ್ಲದೆ ತೊಂದರೆಯುಂಟಾಗುತ್ತಿದೆ. ತಕ್ಷಣ ಶೌಚಗೃಹ ನಿರ್ಮಿಸುವಂತೆ ಒತ್ತಾಯಿಸಿದರು.
ಪಪಂ ಸದಸ್ಯ ವಿಜಯಕುಮಾರ ಐಹೊಳ್ಳಿ ಮಾತನಾಡಿ, ಉದ್ಯಮಿಗಳಿಗೆ ಹೊರೆಯಾಗದಂತೆ ಪರವಾನಗಿ ಶುಲ್ಕವನ್ನು ಹೆಚ್ಚಿಸಬೇಕು. ಪಟ್ಟಣದ ಹಲವು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಪೈಪ್‌ಗಳು ಒಡೆದು ಹೋಗಿದ್ದು, ಅವುಗಳನ್ನು ದುರಸ್ತಿಗೊಳಿಸಬೇಕು. ಕಾಲಮಿತಿಯೊಳಗೆ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವುದರ ಜತೆಗೆ ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮೋದಿನಸಾಬ ಚಿಕ್ಕೂರ, ಸದಸ್ಯರಾದ ವಿಠ್ಠಲಗೌಡ ಗೌಡರ, ಪರಶುರಾಮ ಮಲ್ಲಾಡದ, ಶಂಕರ ಕೆಂದೂಳಿ, ಮಂಜುಳಾ ತಿಮ್ಮಾಪೂರ, ಆಶಾಬಿ ಚೋರಗಸ್ತಿ, ಮಹಾನಂದ ಪೂಜೇರಿ, ಭಾರತಿ ಪರದೇಶಿ, ಅಶೋಕ ಹರಣಶಿಕಾರಿ, ವಿಜಯಕುಮಾರ ಐಹೊಳ್ಳಿ, ಪ್ರವೋದ ಪೂಜಾರ, ಸಿದ್ದಣ್ಣ ಕೊಣ್ಣೂರ, ಮಲ್ಲಪ್ಪ ಹಡಪದ, ಶೋಭಾ ಚಿತ್ರಭಾನು, ಅಕ್ಕಮಹಾದೇವಿ ಶೆಟ್ಟರ, ಕವಿತಾ ಪ್ರಭಾಕರ, ನಾಮ ನಿರ್ದೇಶಿತ ಸದಸ್ಯರಾದ ಶ್ರೀಧರ ಕಾಂಬಳೆ, ಲಾಲಸಾಬ ಸೂಳಿಕೇರಿ, ನಾಗಪ್ಪ ಚೂರಿ, ಎಂ.ಐ. ಹೊಸಮನಿ ಮತ್ತಿತರರಿದ್ದರು.