ಮಹಿಳಾ ಸಬಲೀಕರಣಕ್ಕೆ ಜ್ಞಾನ ವಿಕಾಸ ಜಾರಿ

ಅರಕಲಗೂಡಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಏರ್ಪಡಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಯೋಜನೆಯ ನಿರ್ದೇಶಕಿ ಲೀಲಾವತಿ ಉದ್ಘಾಟಿಸಿದರು. ಡಾ. ನಾಗಲಕ್ಷ್ಮೀ, ವನಿತಾ ಚಂದ್ರಮೋಹನ್, ಎಸ್.ಬಿ. ಜಿನ್ನಪ್ಪ, ಪ್ರಕಾಶ್, ಡಾ.ಶ್ರೀಕಾಂತ್ ಭಾಗವಹಿಸಿದ್ದರು.
ಅರಕಲಗೂಡಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಏರ್ಪಡಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಯೋಜನೆಯ ನಿರ್ದೇಶಕಿ ಲೀಲಾವತಿ ಉದ್ಘಾಟಿಸಿದರು. ಡಾ. ನಾಗಲಕ್ಷ್ಮೀ, ವನಿತಾ ಚಂದ್ರಮೋಹನ್, ಎಸ್.ಬಿ. ಜಿನ್ನಪ್ಪ, ಪ್ರಕಾಶ್, ಡಾ.ಶ್ರೀಕಾಂತ್ ಭಾಗವಹಿಸಿದ್ದರು.
Published on

ಅರಕಲಗೂಡು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರ ಸಬಲೀಕರಣಕ್ಕಾಗಿ ಜ್ಞಾನ ವಿಕಾಸ ಯೋಜನೆ ಜಾರಿಗೆ ತಂದಿದ್ದು, ಇದರಿಂದ ಲಕ್ಷಾಂತರ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ ಎಂದು ಸಂಸ್ಥೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಪಟ್ಟಣದ ಶಿಕ್ಷಕರ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ಮಹಿಳೆಯರಿಗೆ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ, ಕಾನೂನು ಅರಿವು, ಕೌಟುಂಬಿಕ ಸಾಮರಸ್ಯ ಕುರಿತು ಅರಿವು ಮೂಡಿಸುವ ಜತೆಗೆ, ಅಧ್ಯಯನ ಪ್ರವಾಸಗಳ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಹಲವು ಯೋಜನೆಗಳನ್ನು ರೂಪಿಸಿದ್ದು ಉಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಾಸನ ಹಿಮ್ಸ್ ಆಸ್ಪತ್ರೆಯ ರಕ್ತನಿಧಿ ವಿಭಾಗದ ಹಿರಿಯ ತಜ್ಞೆ ಡಾ. ನಾಗಲಕ್ಷ್ಮೀ ಮಾತನಾಡಿ, ಆರೋಗ್ಯವಂಥ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯ. ಕುಟುಂಬಕ್ಕಾಗಿ ದುಡಿಯುವ ಮಹಿಳೆಯರು ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸುತ್ತಿಲ್ಲ. ಬಹಳಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದು, ಇದು ಅವರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಪೌಷ್ಟಿಕ ಆಹಾರ ಸೇವನೆಯಿಂದ ರಕ್ತಹೀನತೆ ತಡೆಯಬಹುದು. ಹಿಂಜರಿಕೆ ಬಿಟ್ಟು ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯರ ಬಳಿ ಮುಕ್ತವಾಗಿ ಹೇಳಿಕೊಂಡಾಗ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದರು.

ಮಹಿಳೆಯರನ್ನು ಹೆಚ್ಚಿನದಾಗಿ ಕಾಡುವ ಪ್ರಸವ ಪೂರ್ವ ಹಾಗೂ ನಂತರದ ಆರೋಗ್ಯ ಸಮಸ್ಯೆಗಳು, ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿ ಮಹಿಳೆಯರೊಂದಿಗೆ ಸಂವಾದ ನಡೆಸಿದರು.

ರಾಜ್ಯ ವೈಜ್ಞಾನಿಕ ಪರಿಷತ್ತಿನ ಕೊಡಗು ಜಿಲ್ಲೆ ಅಧ್ಯಕ್ಷೆ ವನಿತಾ ಚಂದ್ರ ಮೋಹನ್ ಮಾತನಾಡಿದರು. ಡಾ. ಶ್ರೀಕಾಂತ್, ತಾಲೂಕು ಯೋಜನಾಧಿಕಾರಿ ಎಸ್.ಬಿ. ಜಿನ್ನಪ್ಪ, ಜನಜಾಗೃತಿ ವೇದಿಕೆ ಕೊಡಗು ಜಿಲ್ಲಾ ಸದಸ್ಯ ಪ್ರಕಾಶ್, ತಾಲೂಕು ಸಮನ್ವಯಾಧಿಕಾರಿ ಸಪ್ನಾ, ಕೃಷಿ ಮೇಲ್ವಿಚಾರಕ ಸುನಿಲ್ ಕುಮಾರ್, ಲೆಕ್ಕ ಪರಿಶೋಧಕಿ ಭಾರತಿ, ನೋಡೆಲ್ ಅಧಿಕಾರಿ ಅಭಿಜಿತ್, ಮೇಲ್ವಿಚಾರಕ ರವೀಂದ್ರ ಉಪಸ್ಥಿತರಿದ್ದರು. ಮಹಿಳಾ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net