ಚಂದಾಪುರ ಅಭಿವೃದ್ಧಿಗೆ ಆದ್ಯತೆ, ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

4 anekal road show
Published on

ಆನೇಕಲ್: ಚಂದಾಪುರ ಪುರಸಭೆಯ ವಾರ್ಡ್‌ಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದೇ ನನ್ನ ಸಂಕಲ್ಪ ಎಂದು ಪುರಸಭೆಯ ನೂತನ ಅಧ್ಯಕ್ಷ ಕೃಷ್ಣಾರೆಡ್ಡಿ ತಿಳಿಸಿದರು.

ಚಂದಾಪುರ ಪುರಸಭೆಗೆ ಬುಧವಾರ ನೂತನವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡ ನಂತರ ರೋಡ್ ಶೋ ನಡೆಸಿ ಮಾತನಾಡಿದರು.

ಕಸ ವಿಲೇವಾರಿ ಮತ್ತು ಕಸ ಸಂಗ್ರಹ ಘಟಕಗಳ ಕೊರತೆ ಇರುವುದು ಬಹುದೊಡ್ಡ ಸಮಸ್ಯೆಯಾಗಿದೆ. ಆದ್ದರಿಂದ, ವಾರ್ಡ್‌ಗಳಲ್ಲಿ ಸಮರ್ಪಕ ಕಸ ವಿಲೇವಾರಿ ಸಾಧ್ಯವಾಗುತ್ತಿಲ್ಲ. ಇದನ್ನು ಶೀಘ್ರವಾಗಿ ಪರಿಹರಿಸಲಾಗುವುದು ಎಂದರು.

ಕುಡಿಯುವ ನೀರು, ರಸ್ತೆ ಡಾಂಬರೀಕರಣ ಮತ್ತಿತರ ಕಾಮಗಾರಿ ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನಿಸುತ್ತೇನೆ. ಅಭಿವೃದ್ಧಿ ವಿಷಯದಲ್ಲಿ ಪಕ್ಷ ಭೇದ, ತಾರತಮ್ಯ ಮಾಡುವುದಿಲ್ಲ. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾದರಿ ಪುರಸಭೆಯಾಗಿ ಮಾರ್ಪಡಿಸಲು ಪಣ ತೊಟ್ಟಿರುವುದಾಗಿ ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಆರ್.ಟಿ. ಅಶೋಕ್ ರೆಡ್ಡಿ ಮಾತನಾಡಿ, ಕೃಷ್ಣಾ ರೆಡ್ಡಿ ಅವರು ಪಕ್ಷದ ಹಿರಿಯ ಮುಖಂಡರಾಗಿ ಪಕ್ಷಕ್ಕಾಗಿ ದುಡಿದಿದ್ದಾರೆ. ಸಾಮಾನ್ಯ ವರ್ಗಕ್ಕೆ ಸೇರಿದ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವುದು ಸೂಕ್ತ ಎಂದು ಪರಿಗಣಿಸಿ, ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ ಎಂದರು.

ಅಧ್ಯಕ್ಷ ಕೃಷ್ಣಾ ರೆಡ್ಡಿ ಮತ್ತು ಉಪಾಧ್ಯಕ್ಷ ಶ್ರೀನಿವಾಸ್ ಅವರನ್ನು ತೆರೆದ ವಾಹನದಲ್ಲಿ ಚಂದಾಪುರದ ರಾಷ್ಟ್ರೀಯ ಹೆದ್ದಾರಿ ವೃತ್ತದಿಂದ ಸೂರ್ಯಸಿಟಿ ಪ್ರಮುಖ ದ್ವಾರದವರೆಗೆ ರೋಡ್ ಶೋ ಮೂಲಕ ಕರೆದೊಯ್ಯಲಾಯಿತು.

ನಾಮಪತ್ರ ಸಲ್ಲಿಸದ ಕಾಂಗ್ರೆಸ್ ಸದಸ್ಯರು: ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಕೃಷ್ಣಾ ರೆಡ್ಡಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ್ ನಾಮಪತ್ರ ಸಲ್ಲಿಸಿದ್ದರು. ಆದರೆ ಕಾಂಗ್ರೆಸ್‌ನಿಂದ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಸಿರಲಿಲ್ಲ. ಆದ್ದರಿಂದ, ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾ ಅಧಿಕಾರಿ ಮಹದೇವಯ್ಯ ತಿಳಿಸಿದರು.

ಪುರಸಭೆ ಸದಸ್ಯರಾದ ಜಾನಕಮ್ಮ ವೆಂಕಟೇಶ್, ಸರೀತಾ ನಾಗೇಶ್, ಮಂಜುಳಾ ನೀಲಕಂಠಯ್ಯ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮುರಳಿ, ಮುಖಂಡ ಬಿಬಿಐ ರಾಜು, ಜಿಪಂ ಸದಸ್ಯ ನೆರಳೂರು ನಾಗೇಶ್ ರೆಡ್ಡಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net