ಶೈಕ್ಷಣಿಕ ಕ್ಷೇತ್ರ ಬಲವರ್ಧನೆಗೆ ಆದ್ಯತೆ

MLK DINACHARNE 05 (2)
Published on

ಮೊಳಕಾಲ್ಮೂರು: ಜ್ಞಾನ ಸಂಪಾದನೆ ಪರೆದಯಲ್ಲಿ ಪರಿಶುದ್ದ ಸಮಾಜ ನಿರ್ಮಾಣದ ಕೇಂದ್ರ ಬಿಂದುವಾಗಿರುವ ಶಾಲೆಗಳ ಸರ್ವಾಂಗೀಣ ಅಭ್ಯುದಯಕ್ಕೆ ಮೊದಲ ಪ್ರಾಶಸ್ತ್ಯ ಕೊಡಲಾಗಿದೆ ಎಂದು ಎನ್.ವೈ.ಗೋಪಾಲಕೃಷ್ಣ ಭರವಸೆ ವ್ಯಕ್ತಪಡಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲೂಕು ಆಡಳಿತದ ಆಶ್ರಯದಲ್ಲಿ ಪಟ್ಟಣದ ಗುರುಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ಪರ್ಧಾತ್ಮಕ ಜಗತ್ತಿನ ವೈಭವೀಕರಣದಲ್ಲಿ ಉತ್ತಮ ನಾಗರಿಕ ಜೀವನ ನಡೆಸಲು ಶಿಕ್ಷಣವೇ ಬುನಾದಿ. ಪ್ರತಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬುದು ಸರ್ಕಾರದ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿ ಶಾಲೆಗಳಿಗೆ ಶಾಸಕರ ಅನುದಾನ ಹಂಚಲು ಆದ್ಯತೆ ನೀಡುತ್ತೇನೆ ಎಂದರು.

ಶಿಕ್ಷಕರು ತಮ್ಮಲ್ಲಿನ ಸಮಸ್ಯೆಗಳಿಗೆ ತಾವೇ ಉತ್ತರ ಕಂಡುಕೊಂಡು ಗುಣಮಟ್ಟದ ಶಿಕ್ಷಣ ನೀಡಬೇಕು. ಇದಕ್ಕೆ ಪೂರಕವಾಗಿ ಅಂತರಂಗ ಶುದ್ಧಿ, ಶಿಸ್ತು, ಸಂಯಮ, ಸಮನ್ವಯತೆ, ಸಮಯ ಪಾಲನೆಯಲ್ಲಿ ಕರ್ತವ್ಯ ನಿಷ್ಠೆ ಮೆರೆದರೆ ಮಕ್ಕಳಲ್ಲಿ ಸ್ಪರ್ಧಾಮನೋಭಾವ ಹಾಗೂ ಆತ್ಮವಿಶ್ವಾಸ ವೃದ್ಧಿಸಲಿದೆ ಎಂದು ಹೇಳಿದರು.

ಉಪನ್ಯಾಸಕ ಡಾ.ಎಂ.ಗೋವಿಂದರಾಯ ಮಾನಾಡಿ, ಶಾಲೆಗಳಲ್ಲಿ ಶಿಕ್ಷಕರು ಬೆತ್ತ ಮುಟ್ಟದ ಕಾರಣ, ದಾರಿ ತಪ್ಪಿದ ವಿದ್ಯಾರ್ಥಿಗಳು ಲಾಠಿ ರುಚಿ ಅನುಭವಿಸುವುದು ಅನಿವಾರ್ಯವಾಗಿದೆ ಎಂದರು.

ಆದ್ದರಿಂದ ಪ್ರಾಚೀನ ಕಾಲದಲ್ಲಿದ್ದ ಗುರುಪರಂಪರೆ ಪಾಲಿಸಿ, ಶಿಸ್ತು, ಬದ್ಧತೆ, ಕಾಯಕ ತತ್ವದ ಜತೆಗೆ ಕಠಿಣ ಅಭ್ಯಾಸದತ್ತ ಗಮನಹರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಹಾಗೂ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಡಾ.ರಾಧಕೃಷ್ಣನ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಗುರುವಭವನದವರೆಗೆ ಮೆರವಣಿಗೆ ನಡೆಸಲಾಯಿತು.

ತಹಸೀಲ್ದಾರ್ ಎಂ.ವಿ.ರೂಪಾ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಈರಣ್ಣ, ತಾಪಂ ಇಒ ಎಂ.ಆರ್.ಪ್ರಕಾಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷೆ ಎಚ್.ಎನ್.ಸುಜಾತಾ, ಬಿಇಒ ಕೆ.ತಿಪ್ಪೇಸ್ವಾಮಿ, ಅಕ್ಷರ ದಾಸೋಹ ಅಧಿಕಾರಿ ಪಾತಲಿಂಗಪ್ಪ, ಕಸಾಪ ತಾಲೂಕಾಧ್ಯಕ್ಷ ಜಿಂಕಾ ಶ್ರೀನಿವಾಸ, ಮಾಜಿ ಅಧ್ಯಕ್ಷ ಟಿ.ರೇವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಕೆ. ಕಲೀಂವುಲ್ಲಾ, ಮಾಜಿ ಅಧ್ಯಕ್ಷರಾದ ಸುಬಾನ್ ಸಾಬ್, ಪಟೇಲ್ ಜಿ.ಪಾಪನಾಯಕ, ಎಂ.ಮಲ್ಲಿಕಾರ್ಜುನ, ಡಾ.ರಂಗಪ್ಪ, ಎಸ್.ಬಿ.ರಾಮಚಂದ್ರಯ್ಯ, ಡಿ.ರಾಜಣ್ಣ, ಕರಿಬಸಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net