ರೈತರ ಸಮಸ್ಯೆ ಪರಿಹಾರಕ್ಕೆ ಆದ್ಯತೆ: ನೂತನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭರವಸೆ

29
Published on

ಮೈಸೂರು: ಗ್ರಾಮೀಣ ಪ್ರದೇಶದ ಸಮಸ್ಯೆ ಹಾಗೂ ರೈತರ ಸಮಸ್ಯೆ ಬಗೆಹರಿಸಲು ಶಕ್ತಿ ಮೀರಿ ಶ್ರಮಿಸಲಾಗುವುದು ಎಂದು ನೂತನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭರವಸೆ ನೀಡಿದರು.
ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಹಾಗೂ ನೂತನ ಸಂಸದರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರಿಗಾಗಿ ಸದಾ ಸ್ಪಂದಿಸುವ ಕೆಲಸ ನನ್ನದಾಗಿದೆ. ಹೀಗಾಗಿ ನನ್ನ ಕಚೇರಿ ಸದಾ ತೆರೆದಿರುತ್ತದೆ. ರೈತರ ಸಮಸ್ಯೆಗಳು ಇದ್ದರೆ ಅದನ್ನು ಗಮನಕ್ಕೆ ತನ್ನಿ. ನಿಮ್ಮ ಕಡೆ ಪ್ರವಾಸ ಬರಬೇಕಾದರೆ ನಮ್ಮ ಸಹಕಾರ ಏನೇ ಇದ್ದರೂ ನಮಗೂ ಒಂದು ಅನುಭವ ಆಗಲಿದೆ ಎಂದರು.
ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಕಿಸಾನ್ ಸಮ್ಮಾನ್ ಹಣ ಬಿಡುಗಡೆ ಕಡತಕ್ಕೆ ಸಹಿ ಹಾಕುವ ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ. ಮಣ್ಣಿನ ಪೌಷ್ಟಿಕಾಂಶ ಹಾಳಾಗದಂತೆ ಬೆಳೆಯಬಹುದಾದ ಬೆಳೆ ರಾಗಿ ಬೇಸಾಯ ಮಾಡಬಹುದಾಗಿದೆ. ಭಾರತೀಯ ದೇಸಿ ಆಹಾರ ಪದ್ಧತಿಯನ್ನು ರೂಢಿಸಿಕೊಂಡಾಗ ಮಾತ್ರ ಆ ಬೆಳೆಗಳನ್ನು ಉಳಿಸಿಕೊಳ್ಳಲು ಸಹಕಾರಿ ಆಗಲಿದೆ ಎಂದು ಸಲಹೆ ನೀಡಿದರು.
ಚುನಾವಣೆಯಲ್ಲಿ ಪರಿಸರ ಹೆಸರು ಮುಂದಿಟ್ಟು ಪ್ರಚಾರ ಮಾಡಲಾಗಿದ್ದು, ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿಯೂ ಕೆಲಸ ಮಾಡಬೇಕಿದೆ. ಮಾಲಿನ್ಯ ವಿರುದ್ಧದ ಕೆಲಸ ರೈತರ ವಲಯ ಮಟ್ಟದಿಂದಲೇ ಮಾಡಬೇಕಿದೆ. ಪರಿಸರ ಕಾಳಜಿಯಿಂದ ಕೃಷಿ ಮಾಡಿ ಮುಂದಿನ ಪಿಳೀಗೆಗೆ ಒಳ್ಳೆಯ ಸಂದೇಶ ಕೊಡಬೇಕಿದೆ ಎಂದು ಹೇಳಿದರು.
ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಮಾತನಾಡಿ, ಕೃಷಿ ಕ್ಷೇತ್ರ ಕಳೆದ 50 ವರ್ಷದಿಂದ ಸ್ವಾವಲಂಬಿಯಿಂದ ಪರವಾಲಂಬಿ ಹಂತಕ್ಕೆ ಬಂದು ನಿಂತಿದೆ. ಭಾರತ ಶೇ.72 ರಷ್ಟು ಕೃಷಿ ಪ್ರಧಾನ ದೇಶವಾಗಿದ್ದು, ಈಗ ಕೃಷಿ ಅತಂತ್ರ ಸ್ಥಿತಿಯಲ್ಲಿದೆ. ಸರ್ಕಾರದ ಆಡಳಿತವನ್ನು ಕೃಷಿಯೆಡೆಗೆ ಕರೆದೊಯ್ಯುವ ಜವಾಬ್ದಾರಿ ಮೋರ್ಚಾದ್ದಾಗಿದೆ ಎಂದರು.
ಬಿತ್ತನೆ ಬೀಜ, ಗೊಬ್ಬರಕ್ಕಾಗಿ ಪೇಟೆಯನ್ನು ಅವಲಂಬಿಸಿ ಸಂಪೂರ್ಣ ನಗರವನ್ನು ನಂಬಿ ಬದುಕಬೇಕಾದ ಸ್ಥಿತಿ ನಿರ್ಮಾಣ ಆಗಿದೆ. ಮೈಸೂರು ನಗರ ಸುತ್ತಮುತ್ತ ಉತ್ತಮವಾಗಿ ಬೆಳೆಯುತ್ತಿದ್ದ ಕೃಷಿ ಭೂಮಿ ಬಂಡವಾಳಶಾಹಿಗಳ ಪಾಲಾಗಿ ಬರಡು ಪ್ರದೇಶವಾಗಿ ಮಾರ್ಪಾಡಾಗಿದೆ. ಹೀಗೆ ಕೃಷಿ ಭೂಮಿಗೆ ರಕ್ಷಣೆ ಕೊಡದಿದ್ದರೆ ಕೃಷಿ ನಾಶವಾಗಿ ಆಹಾರ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆಗಲಿದೆ ಎಂದು ದೂರಿದರು.
ರೈತ ಮೋರ್ಚಾ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಮಾತನಾಡಿ, ಜಿಲ್ಲೆಯ ರೈತ ಮೋರ್ಚಾ ಪಕ್ಷಾತೀತವಾಗಿ ಸಂಘಟನೆ ಮಾಡಬೇಕಿದೆ. ಮೈಮುಲ್, ಸಹಕಾರ ಸಂಘಟನೆಗಳಲ್ಲಿಯೂ ತೊಡಗಿಸಿಕೊಂಡು ರೈತರ ಸಂಕಷ್ಟಕ್ಕೆ ಸ್ಪಂದಿಸೋಣ. ರಾಜ್ಯ ಸರ್ಕಾರದಿಂದ ರೈತರಿಗೆ ಆಗುತ್ತಿರುವ ಅನನುಕೂಲದ ಬಗ್ಗೆ, ಅನ್ಯಾಯದ ವಿರುದ್ಧ ಹೋರಾಟ ನಡೆಸಬೇಕಿದೆ. ಇದೇ ವೇಳೆ ಕಿಸಾನ್ ಸಮ್ಮಾನ್ ಅನುದಾನ ನೀಡಿದ ಪ್ರಧಾನಿ ಅವರ ಕೈ ಬಲಪಡಿಸೋಣ ಎಂದು ಕೋರಿದರು.
ರೈತ ಮೋರ್ಚಾ ಉಪಾಧ್ಯಕ್ಷರಾಗಿ ಕೆ.ಬಿ.ಗಂಗಾಧರ್, ಸುರೇಶ್, ಮಹದೇವ್ ಹೆಗಡೆ, ಚಂದ್ರಶೇಖರ್, ಜಿಲ್ಲಾ ಕಾರ್ಯದರ್ಶಿಗಳಾಗಿ ನಾಗೇಶ್, ಸತೀಶ್, ಪ್ರಧಾನ ಕಾರ್ಯದರ್ಶಿಗಳಾಗಿ ಮಹದೇವಸ್ವಾಮಿ, ರಾಹುಲ್, ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿ ಸಣ್ಣೇಗೌಡ, ಪಾಲಾಕ್ಷ, ಮಹದೇವನಾಯಕ, ಮೋಹನ್, ಶಿವಕುಮಾರ್, ಪುನೀತ್, ಮಾಯಪ್ಪ, ಪುಟ್ಟರಾಜು, ರಾಜೇಂದ್ರ, ಸೋಮಶೇಖರ್ ಮೊದಲಾದವರಿಗೆ ನೇಮಕ ಪತ್ರ ವಿತರಿಸಲಾಯಿತು.
ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ನವೀನ್‌ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net