

ಮಡಿಕೇರಿ: ರಾಜ್ಯ ಸರ್ಕಾರ ಜನತೆಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಗುಣಮಟ್ಟ ಹೆಚ್ಚಿಸುವ ಕಾರ್ಯಕ್ಕೆ ಆದ್ಯತೆ ನೀಡಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಹೇಳಿದರು.
ನಗರದ ಶ್ರೀ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪದ ಶತಮಾನ ಭವನದಲ್ಲಿ ನೀಮಾ ಸಂಸ್ಥೆಯಿಂದ ಆಯೋಜಿತ ರಾಷ್ಟ್ರೀಯ ೮ನೇ ಆಯುರ್ವೇದ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಶಾಸಕ ಮಂಥರ್ ಗೌಡ, ಆರೋಗ್ಯ ಸಂರಕ್ಷಣೆಯಲ್ಲಿ ಆಲೋಪತಿ ಮತ್ತು ಆಯುರ್ವೇದ ಚಿಕಿತ್ಸೆಗಳು ಬಹುಮುಖ್ಯ ಪಾತ್ರ ವಹಿಸಿದೆ. ಪುರಾತನ ಕಾಲದ ಐತಿಹ್ಯ ಹೊಂದಿರುವ ಆಯುರ್ವೇದ ಮತ್ತು ಅಲೋಪತಿ ಔಷಧೀಯ ಪದ್ಧತಿಗಳ ಬಗ್ಗೆ ಆಗಿಂದಾಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ಹೀಗಿದ್ದರೂ ಆಯುರ್ವೇದ ಮತ್ತು ಅಲೋಪತಿ ಎರಡೂ ಪದ್ಧತಿಗಳನ್ನು ಅಗತ್ಯವಿದ್ದಷ್ಟು ಬಳಸಿಕೊಂಡು ಪ್ರತೀಯೋರ್ವರು ತಮ್ಮ ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ಗಮನ ಹರಿಸಲು ಸಾಧ್ಯ ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಬಹುತೇಕ ಜನ ಒತ್ತಡದ ಜೀವನ ಕ್ರಮದಿಂದಾಗಿ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಎಲ್ಲಕ್ಕಿಂತ ಮೊದಲು ಮಾನಸಿಕವಾಗಿ ಪ್ರತೀಯೋರ್ವರು ಸಂತೋಷದಿಂದ ಇರುವುದು ಮುಖ್ಯವಾಗುತ್ತದೆ. ಮನಸ್ಸಿನ ಸಂತೋಷದಿಂದ ಪ್ರತೀಯೋರ್ವರು ಉತ್ತಮ ಆರೋಗ್ಯ ಸಂಪಾದಿಸಲು ಸಾಧ್ಯವಾಗಲಿದೆ ಎಂದು ಡಾ.ಮಂತರ್ ಗೌಡ ಅಭಿಪ್ರಾಯಪಟ್ಟರು.
ನಗರಸಭೆಯ ಅಧ್ಯಕ್ಷೆ ಅನಿತಾಪೂವಯ್ಯ ಮಾತನಾಡಿ, ಹಳೇ ಕಾಲದಿಂದಲೂ ಮನೆಯಲ್ಲಿ ಬಳಸುವ ಅರಶಿಣ, ಹಳದಿ, ಜೇನುತುಪ್ಪ, ಜೀರಿಗೆ, ಬೆಲ್ಲದಂಥ ಅನೇಕ ಪದಾರ್ಥಗಳು ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ಮುಖ್ಯ ಪಾತ್ರ ವಹಿಸಿದ್ದವು. ಕೋವಿಡ್ ಸಂದರ್ಭದಲ್ಲಿ ಆಯುರ್ವೇದದ ಮಹತ್ವ ಇಡೀ ಜಗತ್ತಿಗೆ ತಿಳಿಯಿತು. ಯಾರೇ ಆದರೂ ಆಹಾರ ಪದ್ದತಿಯನ್ನು ಉತ್ತಮವಾಗಿರಿಸಿಕೊಂಡು, ಜೀವನಶೈಲಿಯನ್ನು ಸರಿದೂಗಿಸಿಕೊಂಡದ್ದೇ ಆದಲ್ಲಿ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ನೀಮಾ ಸಂಸ್ಥೆಯ ಕೊಡಗು ಜಿಲ್ಲಾಧ್ಯಕ್ಷ ಡಾ.ಎ.ಆರ್.ರಾಜಾರಾಮ್ ಮಾತನಾಡಿ, ಕೊಡಗಿನಲ್ಲಿ ಕೂಡ ಆಯುರ್ವೇದ ಔಷಧ ಪದ್ಧತಿ ಜನರಿಂದ ಮನ್ನಣೆ ಪಡೆಯುತ್ತಿರುವ ಈ ದಿನಗಳಲ್ಲಿ ಸರ್ಕಾರ ನೀಮಾ ಸಂಸ್ಥೆ ಬಹಳ ವರ್ಷಗಳ ಬೇಡಿಕೆಯಾಗಿರುವ ಸುಸಜ್ಜಿತ ಆಯುರ್ವೇದ-ಯೋಗ ಭವನಕ್ಕೆ ಕನಿಷ್ಟ ೫ ಎಕ್ರೆ ಜಾಗ ಒದಗಿಸುವಂತೆ ಮನವಿ ಮಾಡಿದರು. ಯೋಗಭವನ ನಿರ್ಮಾಣವಾದಲ್ಲಿ ದೇಶವಿದೇಶಗಳ ಪ್ರವಾಸಿಗರೂ ಕೂಡ ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಅವಕಾಶ ದೊರಕುತ್ತದೆ ಎಂದ ಅವರು, ಸರ್ಕಾರದ ಅಧೀನದಲ್ಲಿನ ಆರೋಗ್ಯ ಇಲಾಖೆಯ ಸಹಾಯವಾಣಿಯಲ್ಲಿ ಆಯುರ್ವೇದ ಪದ್ಧತಿಯ ವೈದ್ಯರಿಗೂ ಸೇವೆ ದೊರಕಿಸುವಂತಾಗಲು ಅವಕಾಶ ಕಲ್ಪಿಸಬೇಕು ಎಂದೂ ರಾಜಾರಾಮ್ ಶಾಸಕರಿಗೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ನೀಮಾ ಕೊಡಗು ಘಟಕದ ಸ್ಥಾಪಕಾಧ್ಯಕ್ಷ ಕೊಡ್ಲಿಪೇಟೆಯ ಡಾ.ಸಿ.ಆರ್.ಉದಯಕುಮಾರ್ ಅವರನ್ನು ನೀಮಾ ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಡಾ. ನಡಿಬೈಲು ಉದಯಕುಮಾರ್ ಸ್ವಾಗತಿಸಿ, ಡಾ.ಸೌಮ್ಯ ಗಣರಾಜ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಡಾ.ಪದ್ಮನಾಭ್ ವಂದಿಸಿದರು. ಜಿಲ್ಲಾ ಆಯುಶ್ ಅಧಿಕಾರಿ ಡಾ.ಸಿ.ರೇಣುಕಾ ದೇವಿ, ನಗರಸಭೆ ಸದಸ್ಯ ಬಿ.ವೈ.ರಾಜೇಶ್, ನೀಮಾ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಡಾ.ಶ್ಯಾಮ್ ಪ್ರಸಾದ್ ವೇದಿಕೆಯಲ್ಲಿದ್ದರು.
ಇದೇ ಸಂದರ್ಭ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪ್ರಯುಕ್ತ ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ತಂಡದಿಂದ ಉಚಿತ ಆರೋಗ್ಯ ತಪಾಸಣೆ, ಸಲಹೆ, ಚಿಕಿತ್ಸಾ ಶಿಬಿರ ಆಯೋಜಿಸಲ್ಪಟ್ಟಿತ್ತು. ಶಿಬಿರಕ್ಕೆ ಮಂಗಳೂರು ವಿಭಾಗದ ಆರೋಗ್ಯ ಭಾರತಿಯ ಸಹಯೋಗ ನೀಡಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಧನ್ವಂತರಿ ಪೂಜೆ ನಡೆಯಿತು. ಆಯುರ್ವೇದ ದಿನಾಚರಣೆ ಅಂಗವಾಗಿ ಆಯೋಜಿತ ಚಿತ್ರಕಲಾ, ಪೋಸ್ಟರ್ ರಚಿಸುವ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಶಾಸಕರು ಬಹುಮಾನ ವಿತರಿಸಿದರು.