

ಸಿಂಧನೂರು: ಸರ್ಕಾರದಿಂದ ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಸದುದ್ದೇಶ ಸರ್ಕಾರ ಹೊಂದಿದೆ ಎಂದು ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ತಾಲೂಕಿನ ತುರ್ವಿಹಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಸುಸಜ್ಜಿತ ಡಯಾಲಿಸಿಸ್ ಕೇಂದ್ರ ಹಾಗೂ ಶಸ್ತ್ರಚಿಕಿತ್ಸಾ ಕೊಠಡಿ ಉದ್ಘಾಟಿಸಿ ಮಾತನಾಡಿದರು. ಹೆರಿಗೆ ಕ್ಲಿಷ್ಟಕರವಾದಲ್ಲಿ ತಾಯಿ, ಮಗುವಿನ ಆರೋಗ್ಯ ದೃಷ್ಟಿಯಿಂದ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಸೌಲಭ್ಯ, ಮೂತ್ರಪಿಂಡದ ಗಂಭಿರ ಸಮಸ್ಯೆ ಅನುಭವಿಸುವ ಬಡವರಿಗೆ ಡಯಾಲಿಸಿಸ್ ಸೇವೆ ಆರಂಭಿಸಲಾಗಿದೆ. ಅಲೆದಾಟ, ಆರ್ಥಿಕ ಸಂಕಷ್ಟದಿಂದ ದೂರಮಾಡಲು ತುರ್ವಿಹಾಳ ಹಾಗೂ ಸುತ್ತಲಿನ 36 ಗ್ರಾಮಗಳು, 14 ಹಟ್ಟಿಗಳ ಜನರ ಅನಕೂಲಕ್ಕಾಗಿ ಎರಡು ಸೇವೆಗಳನ್ನು ಆರಂಭಿಸಿದ್ದು, ಸದುಪಯೋಗ ಪಡೆಯಬೇಕು ಎಂದರು.
ಡಿಎಚ್‌ಒ ಡಾ.ಸುರೇಂದ್ರ ಬಾಬು ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹೆರಿಗೆ ನಿರ್ವಹಣೆಗಾಗಿ ಪ್ರಸೂತಿ ತಜ್ಞರು, ಅರಿವಳಿಕೆ ತಜ್ಞರು ಹಾಗೂ ಮಕ್ಕಳ ತಜ್ಞರ ನೇಮಕಕ್ಕೆ ಆದ್ಯತೆ ನೀಡಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತುರ್ವಿಹಾಳ ಪಪಂ ಅಧ್ಯಕ್ಷ ಬಾಪುಗೌಡ ದೇವರಮನಿ, ಉಪಾಧ್ಯಕ್ಷೆ ಲಕ್ಷ್ಮೀ ಸೋಮನಾಥ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ನಂದಿತಾ ಎಂ.ಎನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಣೇಶ, ಟಿಎಚ್‌ಒ ಡಾ.ಅಯ್ಯನಗೌಡ, ಪ್ರಸೂತಿ ತಜ್ಞ ಡಾ.ನಾಗರಾಜ ಕಾಟ್ವಾ, ಡಾ.ಜೀವನಜ್ಯೋತಿ, ಅರಿವಳಿಕೆ ತಜ್ಞೆ ಡಾ.ಕೋನಿಕಾ, ಮಕ್ಕಳ ತಜ್ಞರಾದ ಡಾ.ದೀಪಿಕಾ, ಡಾ.ವಿರೂಪಾಕ್ಷಪ್ಪ ಇದ್ದರು.