

ಜಮಖಂಡಿ: ಬಾಗಲಕೋಟೆ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿರುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಶ್ರಯದಲ್ಲಿ ನಿರ್ಮಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ (ಪ.ಜಾ) ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿಗೆ ಬಂದ ಯೋಜನೆಗಳನ್ನು ನಾನು ನನ್ನ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗಿಲ್ಲ. ಅಷ್ಟು ಸಣ್ಣತನ ನಾನು ಮಾಡುವುದಿಲ್ಲ. ಹಿಂದೆಯೂ ಮಾಡಿಲ್ಲ. ಈ ಕಟ್ಟಡಕ್ಕೆ ಗೋವಿಂದ ಕಾರಜೋಳ ಮತ್ತು ನ್ಯಾಮಗೌಡ ಅವರು ಅಡಿಗಲ್ಲು ಹಾಕಿದ್ದರು. ಈಗ ನಾನು ಮತ್ತು ಶಾಸಕ ಜಗದೀಶ ಗುಡಗುಂಟಿ ಲೋಕಾರ್ಪಣೆ ಮಾಡಿದ್ದೇವೆ. ಇದು ಪ್ರಜಾತಂತ್ರ ವ್ಯವಸ್ಥೆ. ಹೀಗೆ ಮುಂದುವರಿಯಬೇಕು ಎಂದರು.
ಪಾಲಕರು ರಾಜಕೀಯ ನಾಯಕರ ಬಗ್ಗೆ ಗಂಟೆಗಳ ಕಾಲ ಮಾತನಾಡುತ್ತಾರೆ. ಆದರೆ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ, ಓದು-ಬರಹದ ಬಗ್ಗೆ ಎಷ್ಟು ವೇಳೆ ಚರ್ಚೆ ಮಾಡುತ್ತಾರೆ ಎಂಬುದರ ಪ್ರಶ್ನೆ ಮಾಡಿಕೊಳ್ಳಬೇಕು ಎಂದರು.
ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ಜಮಖಂಡಿ ನಗರದ ತಾಲೂಕು
ಆಡಳಿತ ಸೌಧ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪನೆ ಆಗಬೇಕು. ಕೊಣ್ಣೂರ ಮಡ್ಡಿ ಪ್ಲಾಟ್‌ನಲ್ಲಿನ ಜನರಿಗೆ ಹಕ್ಕು ಪತ್ರ ನೀಡಬೇಕು ಎಂದು ಸಚಿವರಿಗೆ ಮನವಿ ಮಾಡಿಕೊಂಡರು. ಅಲ್ಲದೆ, ಪಿಡಿಒ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಮರೆಗುದ್ದಿ-ಗಲಗಲಿ ಏತ ನೀರಾವರಿ ಯೋಜನೆ ಈ ವರ್ಷದಲ್ಲಿ ಪ್ರಾರಂಭವಾಗಲಿದೆ ಎಂದರು.
ಕಲ್ಯಾಣ ಹೊರಗಿನ ಮಠದ ಡಾ. ವಿಶ್ವಪ್ರಭುದೇವ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಎಸಿ ಶ್ವೇತಾ ಬೀಡಿಕರ, ಗ್ರಾಪಂ ಅಧ್ಯಕ್ಷ ಭಾಗವ್ವ ಅಗಸರ, ಸಿದ್ದಪ್ಪ ಎಣ್ಣಿ, ಅಜಯ ಕಡಪಟ್ಟಿ, ಮಹೀಬೂಬ ಪೆಂಡಾರಿ, ಯಮನೂರ ಮೂಲಂಗಿ, ಮಲ್ಲು ದಾನಗೌಡ, ಈಶ್ವರ ಆದೆಪ್ಪನವರ, ಬಿ.ಎನ್. ಗಸ್ತಿ, ಸದುಗೌಡ ಪಾಟೀಲ, ಮುದಕಣ್ಣ ಅಂಬೀಗರ, ಅಶೋಕ ಕಿವಡಿ, ಸಂಗಪ್ಪ ಎಮ್ಮಣ್ಣವರ, ತಾಪಂ ಇಒ ಸಂಜಿವ ಜುನ್ನೂರ, ಚಿನ್ನು ಅಂಬಿ, ಅಬುಬಕರ ಕುಡಚಿ ಇದ್ದರು.
ಶಾಲಾ ಶಿಕ್ಷಕರು ನಾಡಗೀತೆ ಹಾಡಿದರು. ಆರ್.ಎಂ. ಹೊಸಮನಿ ಸ್ವಾಗತಿಸಿದರು. ಶಿಕ್ಷಕಿ ರಾಣಿ ಕವಿ ನಿರೂಪಿಸಿದರು. ಪ್ರಾಂಶುಪಾಲ ಶಶಿಧರ ಕಡಿಬಾಗಿಲ ವಂದಿಸಿದರು.
ಕಾರ್ಯಕರ್ತರ ಮಾತಿನ ಚಕಮಕಿ: ಕೊಣ್ಣೂರ ಮಡ್ಡಿ ಪ್ಲಾಟ್‌ಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ನಾನು ವೈಯಕ್ತಿಕವಾಗಿ 8 ಲಕ್ಷ ರೂ. ಖರ್ಚು ಮಾಡಿ ದೀಪ ಹಚ್ಚಿಸಿನಿ. ಅದನ್ನು ನಾನು ಮಾಡಿದ್ದು ಎಂದೂ ಹೇಳಿಕೊಂಡಿಲ್ಲ. ಈ ಬಗ್ಗೆ ಸುಳ್ಳು ಹೇಳಬಾರದು ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಅವರು, ಮಾಜಿ ಶಾಸಕ ಆನಂದ ನ್ಯಾಮಗೌಡ ಅವರ ಹೆಸರು ಪ್ರಸ್ತಾಪಿಸದೆ ಭಾಷಣ ಮಾಡಿದರು. ಆಗ ಸಭೆಯಲ್ಲಿ ಸೇರಿದ್ದ ಇಬ್ಬರ ಬೆಂಬಲಿಗರೂ ಪರಸ್ಪರ ಮಾತಿನ ಚಕಮಕಿಗೆ ಮುಂದಾದರು. ಈ ವೇಳೆ ಸಚಿವ ಆರ್.ಬಿ. ತಿಮ್ಮಾಪೂರ ಎಲ್ಲರನ್ನು ಸಮಾಧಾನ ಪಡಿಸಿದರು.