ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಗೆ ಆದ್ಯತೆ

2 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಜ್ಯ ಸರ್ಕಾರ ಉತ್ತರ ಕರ್ನಾಟಕ ಭಾಗಗಳಲ್ಲೂ ಉದ್ದಿಮೆಗಳ ಸ್ಥಾಪನೆಗೆ ಒತ್ತು ನೀಡಿದೆ. ಇದಕ್ಕಾಗಿ ಹೊಸ ಕೈಗಾರಿಕಾ ನೀತಿಯಲ್ಲಿ ಹಲವು ರಿಯಾಯಿತಿ ಮತ್ತು ಸೌಲಭ್ಯ ಒದಗಿಸಲಾಗುತ್ತಿದೆ. ನೈಡೆಕ್​ ಕಂಪನಿಯ ಈ ಯೋಜನೆಗೆ 2 ವರ್ಷಗಳಲ್ಲಿ ಭೂಮಿ ಮಂಜೂರು ಮಾಡಿ, ತ್ವರಿತವಾಗಿ ಅನುಷ್ಠಾನಕ್ಕೆ ಬರುವಂತೆ ಮಾಡಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

ನಗರದ ಬೇಲೂರ ಕೈಗಾರಿಕಾ ಪ್ರದೇಶದಲ್ಲಿ ನೈಡೆಕ್​ ಕಂಪನಿ 600 ಕೋಟಿ ರೂ. ಹೂಡಿಕೆಯೊಂದಿಗೆ ಅಭಿವೃದ್ಧಿ ಪಡಿಸಿರುವ ನೂತನ ಘಟಕವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಪಾನ್​ ಮತ್ತು ಫ್ರೆಂಚ್​ ತಂತ್ರಜ್ಞಾನದ ಈ ಘಟಕ 800 ಜನರಿಗೆ ನೇರ ಉದ್ಯೋಗ ನೀಡಲಿದೆ. ಕಂಪನಿಯ ಬ್ಯಾಟರಿ ಸೊಲ್ಯೂಷನ್​ ಸ್ಥಾವರಕ್ಕೆ 20 ಎಕರೆ ಭೂಮಿ ಕೊಡಲಾಗಿದೆ. ಇಲ್ಲಿ ತಯಾರಾಗುವ 2, 3 ಮತ್ತು 4 ಮೆಗಾವ್ಯಾಟ್​ ಸಾಮರ್ಥ್ಯದ ಹೆವಿ ಡ್ಯೂಟಿ ಮಶೀನ್​ಗಳು ಡೇಟಾ ಸೆಂಟರ್​ ಉದ್ಯಮದ ಅಗತ್ಯ ಪೂರೈಸಲಿದೆ. ಈ ಸಾಧನಗಳನ್ನು ಅಮೆರಿಕ ಮತ್ತು ಯೂರೋಪ್​ಗೆ ರಫ್ತ್ತು ಮಾಡಲಾಗುವುದು. ಘಟಕ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸಿದರೆ 3,000 ಉದ್ಯೋಗ ಸೃಷ್ಟಿ ಆಗಲಿದೆ ಎಂದರು.

ಧಾರವಾಡ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾದ ಘಟಕದಲ್ಲಿ ಡೇಟಾ ಸೆಂಟರ್​ ಉದ್ಯಮಕ್ಕೆ ಬೇಕಾದ ಪವರ್​ ಬ್ಯಾಕಪ್​ ಜನರೇಟರ್​, ವಿಂಡ್​ ಜನರೇಟರ್​, ಬ್ಯಾಟರಿ ಸ್ಟೋರೇಜ್​, ವಿದ್ಯುತ್​ ಚಾಲಿತ ದ್ವಿಚಕ್ರ, ತ್ರಿಚಕ್ರ ಮತ್ತು ಬಸ್​ಗಳಿಗೆ ಬೇಕಾದ ಸಾಧನಗಳನ್ನು ಉತ್ಪಾದಿಸಲಾಗುತ್ತದೆ ಎಂದರು.

ಕೃಷ್ಣಾ ನ್ಯಾಯಾಧಿಕರಣವು ಕೈಗಾರಿಕಾ ಅಗತ್ಯಗಳ ಬಳಕೆಗೆ 4 ಟಿಎಂಸಿ ನೀರು ಮೀಸಲಿಟ್ಟಿದೆ. ಇದರಲ್ಲಿ ನಾವು ಕೇವಲ ಅರ್ಧ ಟಿಎಂಸಿ ನೀರು ಮಾತ್ರ ಬಳಸಿದ್ದೇವೆ. ಇನ್ನೂ 3.5 ಟಿಎಂಸಿ ನೀರು ಹಾಗೆಯೇ ಇದೆ. ಇದರಲ್ಲಿ ನಾವು ರೈತರ ಪಾಲಿನ ನೀರನ್ನು ಮುಟ್ಟಿಲ್ಲ ಎಂದರು.

ಉದ್ಯಮಗಳಿಗೆ ಭೂಮಿ ಸ್ವಾಧಿನ ಪಡಿಸಿಕೊಂಡಾಗ ರೈತರಿಗೆ ತಕ್ಕ ಪರಿಹಾರ ಕೊಡಬೇಕು. ನಾವು ಕೃಷಿ ಮತ್ತು ಕೈಗಾರಿಕೆ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕಾದ ಅಗತ್ಯವಿದೆ ಎಂದರು.

ನಕಾನೆ ಸುಟೋಮು, ಮಾರ್ಕ್​ ಲಾಮಿ, ಕಂಪನಿಯ ಹಿರಿಯ ಅಧಿಕಾರಿಗಳಾದ ಮೈಕಲ್​ ಬ್ರಿಗ್ಸ್​, ಗ್ರೆಗ್​ ಗಾರ್ಮನ್​, ಗಿರೀಶ್​ ಕುಲಕರ್ಣಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net