

ಬೆಂಗಳೂರು: ರಾಜಧಾನಿಯ ನಾಗರಿಕರಿಗೆ ಅತ್ಯತ್ತುಮ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ರೀತಿಯ ಯೋಜನೆಗಳನ್ನು ಜಾರಿಗೊಳಿಸಿ ಅದನ್ನು ಅನುಷ್ಠಾನಕ್ಕೆ ತರಬೇಕಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಹಾಗೂ ಆರೋಗ್ಯಕರ ಬೆಂಗಳೂರಿನ ನೋಡಲ್ ಅಧಿಕಾರಿ ಡಾ. ಕೆ.ವಿ ತ್ರಿಲೋಕ್ ಚಂದ್ರ ತಿಳಿಸಿದರು.
ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಆರೋಗ್ಯಕರ ಬೆಂಗಳೂರು ವಿಷಯಕ್ಕೆ ಸಂಬಂಧಿಸಿದಂತೆ ವಿಕ್ಟೋರಿಯಾ ಆಸ್ಪತ್ರೆಯ ಪಿಎಂಎಸ್‌ಎಸ್‌ವೈ ಸಭಾಂಗಣದಲ್ಲಿ ಗುವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಭಾರತೀಯ ವಿಜ್ಞಾನ ಸಂಸ್ಥೆಯ ಆರ್ಟ್ ಪಾರ್ಕ್‌ನ ಪಾಲುದಾರಿಕೆಯಲ್ಲಿ ಆರೋಗ್ಯಕರ ಬೆಂಗಳೂರಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬಂದಂತಹ ಸುಮಾರು 10,478 ಸಲಹೆಗಳನ್ನು ಅಧ್ಯಯನ ನಡೆಸಲಾಗಿದೆ. ಒಂದೇ ರೀತಿಯ ಸಲಹೆಗಳನ್ನು ಹೆಕ್ಕಿದ ಬಳಿಕ 8,059 ಸಲಹೆ/ಅಭಿಪ್ರಾಯಗಳನ್ನು ಬೇರೆ ಬೇರೆ ವರ್ಗಗಳಾಗಿ ವಿಂಗಡಿಸಿ ವರದಿಯನ್ನು ಸಿದ್ದಪಡಿಸಿದ್ದು, ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಬೆಂಗಳೂರಿನಲ್ಲಿರುವ ನಾಗರಿಕರಿಗೆ ಸುಲಭವಾಗಿ ಆರೋಗ್ಯ ಸೇವೆ ಪಡೆಯಲು ಮತ್ತು ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಯನ್ನು ಹೊಂದುವ ಹಾಗೆ ಮಾಡಬೇಕು. ಹೆಚ್ಚು ಸುರಕ್ಷಿತ ಮತ್ತು ಆರೋಗ್ಯಕರ ನಗರವನ್ನು ಸ್ಥಾಪಿಸುವ ಸಲುವಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಅವರು ಪ್ರತಿಪಾದಿಸಿದರು.
ಪ್ರಾಥಮಿಕ ಆರೋಗ್ಯ ಘಟಕದಿಂದ ತೃತೀಯ ಸೇವೆ ನೀಡುತ್ತಿರುವ ಪ್ರಮುಖ ಆಸ್ಪತ್ರೆಗಳಿಗೆ ಇರುವ ಅಂತರವನ್ನು ಕಡಿಮೆ ಮಾಡಿ ನಾಗರಿಕರಿಗೆ ಸುಲಭ ರೀತಿಯಲ್ಲಿ ಆರೋಗ್ಯ ಸೇವೆ ಸಿಗುವಂತೆ ಮಾಡಬೇಕಿದೆ ಎಂದು ಅವರು ವಿವರಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಹೆರಿಗೆ ಆಸ್ಪತ್ರೆಗಳಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು. ನಗರದಲ್ಲಿ 232 ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಅದನ್ನು ಮತ್ತಷ್ಟು ಬಲಪಡಿಸಲು ಮತ್ತು ಕೆಲಸದ ಸಮಯವನ್ನು ಹೆಚ್ಚಿಸುವ ಉದ್ದೇಶದಿಂದ ಈಗಾಗಲೇ ಕೆಲ ಕ್ಲಿನಿಕ್‌ಗಳಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಕ್ಲಿನಿಕ್‌ಗಳ ಸಮಯವನ್ನು ವಿಸ್ತರಿಸಲಾಗುವುದು ಎಂದು ಡಾ. ತ್ರಿಲೋಕ್ ಚಂದ್ರ ತಿಳಿಸಿದರು.
* ಆರೋಗ್ಯ ಸೇವೆಯಲ್ಲಿ ಹೂಡಿಕೆ ಹೆಚ್ಚಳ
* ತುರ್ತು ಆರೋಗ್ಯ ಸೇವೆಗಳ ವ್ಯವಸ್ಥೆ
* ಸಿಎಸ್‌ಆರ್ ಪಾಲುದಾರರೊಂದಿಗೆ ಸಹಯೋಗ
* ಬೆಂಗಳೂರು ಆರೋಗ್ಯ ವ್ಯವಸ್ಥೆ ಆನುಷ್ಠಾನ
* ವಾರ್ ರೂಮ್ ಮತ್ತು ಕಣ್ಗಾವಲು ವ್ಯವಸ್ಥೆ
* ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲ್ಯಾಬ್ ಸೇವೆ ಹೆಚ್ಚಳ
* ಬೆಂಗಳೂರಿಗೆ ಆಂಟಿಮೈಕ್ರೊಬಿಯಲ್ ನೀತಿ ಜಾರಿ
* ಬೆಂಗಳೂರಿನಲ್ಲಿ ಪಶುವೈದ್ಯಕೀಯ ಆರೈಕೆ ವ್ಯವಸ್ಥೆ.