

ಹೂವಿನಹಡಗಲಿ: ಪಟ್ಟಣದಲ್ಲಿ ಈಗಿರುವ 2 ಹಂತದ ಕುಡಿವ ನೀರಿನ ಯೋಜನೆಯಲ್ಲಿ ಕೇವಲ ಒಂದೇ ಪೈಪ್ ಮೂಲಕ ನೀರು ಸರಬರಾಜಾಗುತ್ತಿದೆ. ಮತ್ತೊಂದು ಪೈಪ್‌ಲೈನ್ ಅಳವಡಿಸಿ ಓವರ್‌ಹೆಡ್ ಟ್ಯಾಂಕ್‌ಗೆ ನೀರು ಪೂರೈಸಲಾಗುವುದು ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಪುರಸಭೆಯ ಎಂ.ಪಿ.ಪ್ರಕಾಶ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಮಗ್ರ ಅಭಿವೃದ್ಧಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
15ನೇ ಹಣಕಾಸು ಯೋಜನೆಯ 1.44 ಕೋಟಿ ರೂ. ಅನುದಾನದಲ್ಲಿ 43.2 ಲಕ್ಷ ರೂ. ಕುಡಿವ ನೀರು, 43 ಲಕ್ಷ ರೂ. ಘನತ್ಯಾಜ್ಯ ವಿಲೇವಾರಿ, 57.6 ಲಕ್ಷ ರೂ. ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಎಸ್‌ಎಫ್‌ಸಿ 71ಲಕ್ಷ ರೂ. ಎಸ್‌ಸಿಪಿ ಮತ್ತು ಟಿಎಸ್‌ಪಿ ಇತರ ಅನುದಾನದಲ್ಲಿ ಪೌರ ಕಾರ್ಮಿಕರ ಕಲ್ಯಾಣ ಸಮುದಾಯ ಆಧಾರಿತ ಕಾಮಗಾರಿ ಮತ್ತು ಟಿಎಸ್‌ಪಿಯ 2.4 ಲಕ್ಷ ರೂ.ನಲ್ಲಿ ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಮಾಡಲಾಗುವುದು. ಸದಸ್ಯರು ವಾರ್ಡ್‌ನ ಸಮಸ್ಯೆ ಕುರಿತು ಲಿಖಿತವಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದರು.
ಈಗಾಗಲೇ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯಿಂದ ಮೊದಲ ಹಂತದಲ್ಲಿ 15 ಕೋಟಿ ರೂ. ಬಿಡುಗಡೆಗೊಳಿಸುವ ಭರವಸೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗದಂತೆ ಕಾಮಗಾರಿ ನಡೆಸಲಾಗುವುದು ಎಂದು ತಿಳಿಸಿದರು.
ನಗರೋತ್ಥಾನ, ಪುರಸಭೆಯ ವಿವಿಧ ಯೋಜನೆಯ 3ನೇ ಹಂತದ ಉಳಿತಾಯ ಹಣ 1.90 ಕೋಟಿ ರೂ.ಯಲ್ಲಿ ಹಮ್ಮಿಕೊಂಡಿರುವ ಸಿಸಿ ರಸ್ತೆ ಇತರ ಕಾಮಗಾರಿಗೆ ಟೆಂಡರ್ ಕರೆದು ವರ್ಷವಾದರೂ ಕೆಲಸ ಆರಂಭಿಸಿಲ್ಲ ಎಂದು ಸದಸ್ಯರಾದ ವಾರದ ಗೌಸ್ ಮೊದ್ದೀನ್, ಸೊಪ್ಪಿನ ಮಂಜುನಾಥ ಸಭೆಯ ಗಮನಕ್ಕೆ ತಂದರು. ಕೂಡಲೇ ಈ ಸಮಸ್ಯೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಾರದ ಸಂತೆ ನಿವೇಶನದಲ್ಲಿ ನಿರ್ಮಾಣವಾಗಬೇಕಿದ್ದ ನೆಮ್ಮದಿ ಊರು ಕಾಮಗಾರಿ ಅಪೂರ್ಣಗೊಂಡಿದೆ. ಮಳೆಗಾಲದಲ್ಲಿ ವಾರದ ಸಂತೆಯು ಕೆಸರು ಗದ್ದೆಯಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹಾಲಿ ಅಪೂರ್ಣವಾಗಿರುವ ಕಾಮಗಾರಿಯನ್ನು ನವೀಕರಣಗೊಳಿಸಿ, ಹೈಟೆಕ್ ಸಂತೆ ಮಾರುಕಟ್ಟೆಯನ್ನು ನಿರ್ಮಿಸುವಂತೆ ಸದಸ್ಯರು ಶಾಸಕರಿಗೆ ಮನವಿ ಮಾಡಿದರು. ಪ್ರತಿಕ್ರಿಯಿಸಿದ ಶಾಸಕರು, ಜಿಲ್ಲಾಧಿಕಾರಿ, ಸಂಬಂಧಿಸಿದ ಇಲಾಖೆ ಮತ್ತು ಗುತ್ತಿಗೆದಾರರ ಬಳಿ ಚರ್ಚಿಸಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು.
ಪ್ರತಿ ವಾರ್ಡ್‌ನಲ್ಲೂ ಸಿಸಿ ರಸ್ತೆ, ಯುಜಿಡಿ ಅಗತ್ಯವಿರುವ ಎಲ್ಲ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು. ಅಭಿವೃದ್ಧಿ ವಿಚಾರದಲ್ಲಿ ಸದಸ್ಯರು ಪಕ್ಷ ಬೇಧ ಮರೆತು ಸಹಕರಿಸಬೇಕೆಂದು ಮನವಿ ಮಾಡಿದರು.
ಕಾಳಿಕಾಂಬ ದೇಗುಲದಿಂದ ಮದಲಗಟ್ಟಿ ವೃತ್ತದವರೆಗೆ ರಾಜ್ಯ ಹೆದ್ದಾರಿ ಮಧ್ಯೆ ಅಳವಡಿಸಿರುವ ವಿದ್ಯುತ್ ಕಂಬ ತೆರವುಗೊಳಿಸಿ ರಸ್ತೆಯ ಎರಡೂ ಬದಿಯಲ್ಲಿ ಕಂಬಗಳನ್ನು ಅಳವಡಿಸಬೇಕೆಂದು ಸದಸ್ಯರ ಬೇಡಿಕೆಗೆ ಶಾಸಕರು ಸ್ಪಂದಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಗೋಣಿ ಬಸವೇಶ್ವರ ದೇಗುಲದ ಪಕ್ಕದಲ್ಲಿರುವ ಸರ್ಕಾರಿ ನಿವೇಶನ ಖಾಸಗಿಯಾಗಿ ಒತ್ತುವರಿಯಾಗಿದ್ದು, ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ಕುರಿತು ಸಾಕಷ್ಟು ಬಾರಿ ತಿಳಿಸಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಸದಸ್ಯ ಐಗೋಳ ಸುರೇಶ ದೂರಿದರು.
ಈ ಕುರಿತು ಕ್ರಮ ಕೈಗೊಳ್ಳುವಂತೆ ಶಾಸಕರು ಮುಖ್ಯಾಧಿಕಾರಿಗೆ ಸೂಚಿಸಿದರು. ಎಸಿ ಟಿ.ವಿ.ಪ್ರಕಾಶ, ಮುಖ್ಯಾಧಿಕಾರಿ ಮಲ್ಲೇಶ ಇತರರಿದ್ದರು.