ಅಪರಾಧಮುಕ್ತ ತಾಲೂಕಿಗೆ ಆದ್ಯತೆ

29 07 2025_BNG_RURLA_PAGE_2
ಆನೇಕಲ್​ ಪಟ್ಟಣದ ಜನತಾ ಕಾಲನಿ ಅಂಬೇಡ್ಕರ್​ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎಸ್ಸಿ&ಎಸ್ಟಿ ಕುಂದುಕೊರತೆ ಸಭೆಯಲ್ಲಿ ಎಎಸ್​ಪಿ ವೆಂಕಟೇಶ್​ ಪ್ರಸನ್ನ, ಡಿವೈಎಸ್ಪಿ ಮೋಹನ್​ ಕುಮಾರ್​, ಪೊಲೀಸ್​ ಇನ್​ಸ್ಪೆಕ್ಟರ್​ಗಳಾದ ತಿಪ್ಪೇಸ್ವಾಮಿ, ನವೀನ್​ ಕುಮಾರ್​, ರಾವ ಗೌಡ, ಮಂಜುನಾಥ್​, ಸಂಜೀವ್​ ಮಹಾಜನ್​, ಕೃಷ್ಣಕುಮಾರ್​ ಇದ್ದರು.
Published on

ಆನೇಕಲ್​ : ತಾಲೂಕಿನ ಎಲ್ಲ ಪೊಲೀಸ್​ ಠಾಣೆಗಳಲ್ಲಿಯೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕುಂದು ಕೊರತೆ ಸಭೆ ನಡೆಸಲು ಸೂಚಿಸಲಾಗಿದೆ. ತಾಲೂಕಿನಲ್ಲಿ ಹೆಚ್ಚಿನ ಕೈಗಾರಿಕಾ ಪ್ರದೇಶಗಳು ಇರುವುದರಿಂದ ಈ ಭಾಗದಲ್ಲಿ ಕಾನೂನು ಮತ್ತು ಸುರತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಎಎಸ್​ಪಿ ವೆಂಕಟೇಶ್​ ಪ್ರಸನ್ನ ಹೇಳಿದರು. ಪಟ್ಟಣದ ಜನತಾ ಕಾಲನಿ ಅಂಬೇಡ್ಕರ್​ ಭವನದಲ್ಲಿ ಆನೇಕಲ್​ ಪೊಲೀಸ್​ ಠಾಣೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಎಸ್ಸಿ&ಎಸ್ಟಿ ಕುಂದುಕೊರತೆ ಸಭೆಯಲ್ಲಿ ಸಮುದಾಯದವರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು. ಆನೇಕಲ್​ ತಾಲೂಕನ್ನು ಡ್ರಗ್ಸ್​ ಮತ್ತು ಅಪರಾಧ ಮುಕ್ತವಾಗಿಸಲು ಯುವಕರಲ್ಲಿ ಪೊಲೀಸರು ಜಾಗೃತಿ ಮೂಡಿಸಬೇಕು. ದಲಿತರ ಮೇಲಿನ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ದೂರು ದಾಖಲಿಸಿಕೊಳ್ಳಬೇಕು. ವಿವಿಧ ಗ್ರಾಮಗಳಲ್ಲಿ ಮದ್ಯ ಮಾರಾಟ ಅಕ್ರಮ ನಡೆಯುತ್ತಿದ್ದು, ಪೊಲೀಸ್​ ಮತ್ತು ಅಬಕಾರಿ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಭೆಯಲ್ಲಿ ಸಮುದಾಯದವರು ಒತ್ತಾಯಿಸಿದರು.

ಬೀಟ್​ ವ್ಯವಸ್ಥೆ ಕಲ್ಪಿಸಿ: ಅಪರಾಧಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿ ಹಳ್ಳಿಯಲ್ಲೂ ಪೊಲೀಸ್​ ಬೀಟ್​ ವ್ಯವಸ್ಥೆ ಮಾಡಬೇಕು. ದಲಿತರ ಕುಂದು ಕೊರತೆಗಳ ಸಭೆಯನ್ನು ನಿಯಮಿತವಾಗಿ ಆಯೋಜಿಸಬೇಕು. ಸಭೆ ನಡೆಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ನಾಗರಿಕರು ಒತ್ತಾಯಿಸಿದರಲ್ಲದೇ ಆನೇಕಲ್​ ಪೊಲೀಸ್​ ಠಾಣೆ ವ್ಯಾಪ್ತಿಯ ಕಾಲೇಜುಗಳ ಬಳಿ ವಿದ್ಯಾರ್ಥಿಗಳು ಬರುವ ಮತ್ತು ಹೋಗುವ ಸಮಯದಲ್ಲಿ ಪೊಲೀಸ್​ ಪೇದೆಗಳನ್ನು ನಿಯೋಜಿಸಬೇಕು ಎಂಬ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net