ಪ್ರಾಥಮಿಕ ಹಂತದಲ್ಲೇ ಶೈಕ್ಷಣಿಕ ಸುಧಾರಣೆಗೆ ಆದ್ಯತೆ ನೀಡಿ

30 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಶೈಕ್ಷಣಿಕ ಸುಧಾರಣೆಗೆ ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ ಮಿಷನ್​ ವಿದ್ಯಾಕಾಶಿ ಯೋಜನೆ ಮೂಲಕ ವಿನೂತನ ಕ್ರಮ ಕೈಗೊಳ್ಳುತ್ತಿದೆ. ಶಾಲೆ ಹಂತದಲ್ಲೇ ಮಕ್ಕಳನ್ನು ಸುಧಾರಿಸಲು ಪ್ರಯತ್ನಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಹೇಳಿದರು.

ನಗರದ ಸರ್ಕಾರಿ ಮಹಿಳಾ ತರಬೇತಿ ಕೇಂದ್ರ ಆವರಣದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ ಮತ್ತು ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಪ್ರಸಕ್ತ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದಿನ ಶಿಕ್ಷಣ ಪದ್ಧತಿಗೂ ಪ್ರಸ್ತುತ ಪದ್ಧತಿಗೂ ವ್ಯತ್ಯಾಸವಿದೆ. ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಅತ್ಯವಿದೆ. ಸರ್ಕಾರಿ ಶಾಲೆಗಳಲ್ಲಿ ನಾವು ಇನ್ನೂ ಉತ್ತಮ ಫಲಿತಾಂಶ ಕೊಟ್ಟರೆ ಶಾಲೆಯಲ್ಲಿನ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾಗಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವಾಗ ಭಾಷಾ ಬಳಕೆ, ವ್ಯಾಕರಣ ಅರ್ಥವಾಗುವಂತೆ ಕಲಿಸಬೇಕು. ಮಕ್ಕಳ ಆರಂಭಿಕ ಶಿಕ್ಷಣ ಮುಖ್ಯ.ಇಂದು ಗುಣಮಟ್ಟದ ಶಿಕ್ಷಣ ಅವಶ್ಯವಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗದ ಹಾಗೆ ನೋಡಿಕೊಳ್ಳುವ ಜವಾಬ್ದಾರಿಯೂ ಶಿಕ್ಷಕರಿಗೆ ಇರುತ್ತದೆ ಎಂದರು.

ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಯಿತು. ಅಶೋಕ ಸಿಂದಗಿ, ರೇಣುಕಾ ಅಮಲಝರಿ, ಸೀಮಾ ಹುಗ್ಗಿ, ದೀಪ್ತಿ ಅಪಯ್ಯ, ಖ್ವಾಜಾಮಿಯಾ ದೇದಾರ, ಮುಖ್ಯಾಧ್ಯಾಪಕರು, ಶಿಕ್ಷಕರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net