ನೀರಿನ ಸಂರಕ್ಷಣೆಗೆ ಆದ್ಯತೆ ನೀಡಿ, ಜಿಪಂ ಸಿಇಒ ನಾಗರಾಜ್ ಸಲಹೆ ಜಲಾಮೃತ ಯೋಜನೆ ಯಶಸ್ಸಿಗೆ ಶ್ರಮಿಸಲು ಮನವಿ

1
Published on

ಬೆಂಗಳೂರು: ಜಲ ಸಂರಕ್ಷಣೆ, ಜಲ ಸಾಕ್ಷರತೆ, ಜಲ ಮೂಲ ಪುನಶ್ಚೇತನ ಮತ್ತು ಹಸಿರೀಕರಣ ಕೇಂದ್ರವಾಗಿಟ್ಟುಕೊಂಡು ನೀರಿನ ಸಂರಕ್ಷಣೆಗೆ ಆದ್ಯತೆ ನೀಡುವ ಜಲಾಮೃತ ಯೋಜನೆ ಯಶಸ್ಸಿಗೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಎನ್. ನಾಗರಾಜ್ ತಿಳಿಸಿದರು.

ದೇವನಹಳ್ಳಿ ತಾಲೂಕಿನ ಬೀರಸಂದ್ರದ ಜಿಲ್ಲಾಡಳಿತ ಭವನದಲ್ಲಿ ಜಲಾನಯನ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಜಲಾಮೃತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನೀರಿನ ಸಮಸ್ಯೆಯನ್ನು ಮೂಲದಿಂದ ನಿವಾರಿಸುವ ಸಲುವಾಗಿ ಜಲಾಮೃತ ಯೋಜನೆ ಜಾರಿಗೆ ತರಲಾಗಿದ್ದು, ಕೃಷಿ ಚಟುವಟಿಕೆ ಹೆಚ್ಚಾಗಿ ಕಂಡುಬರುವ ಗ್ರಾಮೀಣ ಪ್ರದೇಶದಲ್ಲಿ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಹಾಗೂ ಜಲಾಮೃತ ಯೋಜನೆ ಒಗ್ಗೂಡಿಸಿ ಗ್ರಾಮದ ಜನರನ್ನೇ ಬಳಸಿಕೊಂಡು ಜಲ ಸಂರಕ್ಷಣೆ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಲ ಮೂಲ ಪುನಶ್ಚೇತನ ಕಾರ್ಯಕ್ರಮದಡಿ ಕೊಳವೆಬಾವಿ ಮರುಪೂರಣ, ಕೆರೆಗಳ ಹೂಳೆತ್ತುವಿಕೆ, ನೂತನ ಕೆರೆ, ಚೆಕ್ ಡ್ಯಾಂ, ಕಲ್ಯಾಣಿ, ಕೊಳಗಳ ನಿರ್ಮಾಣ, ಗೋ ಕಟ್ಟೆಗಳ ನಿರ್ಮಾಣದಂತಹ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.

ನೀರಿನ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕಾಲ ಕಾಲಕ್ಕೆ ನೀರಿನ ಸ್ಥರಗಳ ಸ್ವಚ್ಛತಾ ಕಾರ್ಯವನ್ನು ಜಲಾಮೃತ ಯೋಜನೆಯಡಿ ಮಾಡಲಾಗುವುದು. ಹಸಿರೀಕರಣದ ಮುಖೇನ ಮರಗಳನ್ನು ಹೆಚ್ಚೆಚ್ಚು ಬೆಳೆಸುವ ಮಹತ್ತರ ಕಾರ್ಯವನ್ನೂ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಲಾಮೃತ ಯೋಜನೆಯಡಿ ಜಿಲ್ಲೆಯಲ್ಲಿ ಸಮಗ್ರ ಹಸಿರೀಕರಣ ಕಾರ್ಯಕ್ರಮವನ್ನು ಸಮುದಾಯದ ಪಾಲ್ಗೊಳ್ಳುವಿಕೆಯೊಂದಿಗೆ ಅಂದಾಜು 60 ಸಾವಿರ ಸಸಿಗಳನ್ನು ನೆಡಿಸಲು ಕಾರ್ಯ ರೂಪಿಸಲಾಗಿದೆ. ಸಾಂಪ್ರದಾಯಿಕ ಜಲಮೂಲ ಗುರುತಿಸಲಾಗಿದ್ದು, ಆಯಾ ಗ್ರಾಪಂ ಮೂಲಕ ಪುನಶ್ಚೇತನ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಜಲಾಮೃತ ಯೋಜನೆಯಲ್ಲಿ ಪ್ರಮುಖ ಕೆರೆಗಳನ್ನು ಆಯ್ಕೆ ಮಾಡಲಾಗಿದ್ದು, ಕೆರೆಗಳ ಅಗತ್ಯತೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಗುಳ್ಯ ನಂದಿಗುಂದ, ಕೊಡಿಗೇಹಳ್ಳಿ, ಕೊನಘಟ್ಟ, ಕುರುಬರಹಳ್ಳಿ , ರಬ್ಬನಹಳ್ಳಿ ಮತ್ತು ಲಿಂಗನಹಳ್ಳಿಯನ್ನು ಕಿರು ಜಲಾನಯನ ಯೋಜನೆ ಅನುಷ್ಠಾನಗೊಳಿಸಲು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ನೆಲಮಂಗಲ ತಾಲೂಕಿನ ಹೊನ್ನಸಂದ್ರ, ಲಿಂಗೇನಹಳ್ಳಿ, ಮಹದೇವಪುರ, ದೊಡ್ಡೇಕರೇನಹಳ್ಳಿ ಮತ್ತು ಬಾವಿಕೆರೆ ಹಾಗೂ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ, ಮಾಕನಹಳ್ಳಿ, ತಿಂಡ್ಲು, ದಾಸರಹಳ್ಳಿ ಹಂದೇನಹಳ್ಳಿ, ಮಾರಸಂದ್ರ ನಾರಾಯಣ ಕೆರೆ, ಪರಾಮನಹಳ್ಳಿ, ಖಾಜಿ ಹೊಸಳ್ಳಿಯನ್ನು ಕಿರು ಜಲಾನಯನ ಕಾಮಗಾರಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಪಂ ಮುಖ್ಯ ಕಾರ್ಯದರ್ಶಿ ಕೆ.ಕರಿಯಪ್ಪ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಯಸ್ವಾಮಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ್ ಮುರುಗೋಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net