

ರೋಣ: ಮನೆ ಹಾಗೂ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಗ್ರಾಮದ ಸ್ವಚ್ಛತೆಗೂ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ತಾಪಂ ಇಒ ಮಂಜುಳಾ ಹಕಾರಿ ಹೇಳಿದರು.
ತಾಲೂಕಿನ ಹಿರೇಹಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ)ಅಡಿಯಲ್ಲಿ ‘ಸ್ವಚ್ಛತಾ ಹೀ ಸೇವಾ ಜನಾಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಹಾತ್ಮ ಗಾಂಧೀಜಿ ಅವರು ಗ್ರಾಮ ಸ್ವರಾಜ್ಯದ ಮೂಲಕ ಹಳ್ಳಿಗಳ ಬೆಳವಣಿಗೆಗೆ ವಿಶೇಷ ಆಸಕ್ತಿ ಹೊಂದಿದ್ದರು. ದೇಶವನ್ನು ಎಲ್ಲಾ ರೀತಿಯಲ್ಲಿ ಸ್ವಚ್ಛವಾಗಿಡಲು ಅತ್ಯಂತ ಕಳಕಳಿ ಹೊಂದಿದ್ದರು. ಈ ಹಿನ್ನೆಲೆ ಅವರಿಗೆ ಗ್ರಾಮ ಸ್ವಚ್ಛವಾಗಿಸುವ ಮೂಲಕ ಗೌರವ ಸಲ್ಲಿಸುವ ಕೆಲಸ ಮಾಡಬೇಕಿದೆ ಎಂದರು.
ತಾಪಂ ಸಹಾಯಕ ನಿರ್ದೇಶಕ ಚಂದ್ರಶೇಖರ ಕಂದಕೂರ ಮಾತನಾಡಿ, ಮನೆ ಹಾಗೂ ಮನೆ ಸುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಸಾಂಕ್ರಾಮಿಕ ಕಾಯಿಲೆಗಳು ಭೀತಿ ಬಾರದು. ಹೀಗಾಗಿ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಿಬೇಕು ಂದು ಗ್ರಾಮಸ್ಥರಿಗೆ ಮನವಿ ಮಾಡಿದರು.
ಹಿರೇಹಾಳ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಸ್ವಚ್ಛತಾ ಹೀ ಸೇವಾ ಆಂದೋಲನದ ಅಂಗವಾಗಿ ಶಾಲಾ ಮಕ್ಕಳಿಗೆ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ನಡೆಸಿ ಜನರಲ್ಲಿ ವಿಶೇಷ ಜಾಗೃತಿ ಮೂಡಿಸಲಾಯಿತು.
ಹಿರೇಹಾಳ ಬಸ್ ನಿಲ್ದಾಣದಲ್ಲಿ ತಾಪಂ ಇಒ ಮಂಜುಳಾ ಹಕಾರಿ, ಸಹಾಯಕ ನಿರ್ದೇಶಕ ಚಂದ್ರಶೇಖರ ಕಂದಕೂರ ಹಾಗೂ ಪಿಡಿಒ ಬಿ.ಎಸ್. ದಳವಾಯಿ ತಾವೇ ಕಸ ಗೂಡಿಸುವ ಮೂಲಕ ಬಸ್ ನಿಲ್ದಾಣ ಸ್ವಚ್ಛಗೊಳಿಸಿ ಗ್ರಾಮಸ್ಥರಿಗೆ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಿದರು. ಗ್ರಾಪಂ ಅಧ್ಯಕ್ಷೆ ರೇಣವ್ವ ಲಕ್ಕಪ್ಪ ಗುಡಿಮನಿ, ಉಪಾಧ್ಯಕ್ಷ ನೀಲಪ್ಪ ದಳಪತಿ, ಇತರರಿದ್ದರು.