ಮೌಲ್ಯಯುತ ಸುದ್ದಿಗಳಿಗೆ ಆದ್ಯತೆ ನೀಡಿ

2
Published on

ಇಂದಿನ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಇದರ ಬಳಕೆಯಿಂದ ಪತ್ರಿಕೋದ್ಯಮ ಮೇಲ್ದರ್ಜೆಗೇರಿದೆ. ಈ ವೇಳೆ ಮಾಧ್ಯಮ ಪ್ರತಿನಿಧಿಗಳು ಮೌಲ್ಯವನ್ನು ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.

ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸೋಮವಾರ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದವು ಆಯೋಜಿಸಿದ್ದ ‘ಜರ್ನೋತಿ -23 ಮಾಧ್ಯಮ ಹಬ್ಬ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇದ್ದುದ್ದನ್ನು ಇದ್ದಂತೆ ಹೇಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಪತ್ರಕರ್ತರು ಕೆಟ್ಟ ಸುದ್ದಿಗಳಿಗೆ ಕಡಿಮೆ ಆದ್ಯತೆ ನೀಡಿ, ಒಳ್ಳೆಯ ಮೌಲ್ಯ ಸಾರುವ ಸುದ್ದಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಕಟಿಸಬೇಕು. ಮಾಧ್ಯಮ ಪ್ರತಿನಿಧಿಗಳು ಮೌಲ್ಯಗಳನ್ನು ಅರಿತು ಕರ್ತವ್ಯ ನಿರ್ವಹಿಸಬೇಕು. ಇದ್ದುದ್ದನ್ನು ಇದ್ದ ಹಾಗೆ ಹೇಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಪತ್ರಕರ್ತ ಸುದರ್ಶನ್ ಚನ್ನಂಗಿಹಳ್ಳಿ ಮಾತನಾಡಿ, ಮುದ್ರಣ ಮಾಧ್ಯಮದಲ್ಲಿ ಉದ್ಯೋಗಾವಕಾಶ ವಿಪುಲವಾಗಿದ್ದರೂ, ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಪತ್ರಿಕೋದ್ಯಮ ಇತ್ತೀಚೆಗೆ ಬದಲಾಗಿದ್ದು, ವಿದ್ಯಾರ್ಥಿಗಳು ಟಿವಿ, ಡಿಜಿಟಲ್ ಮಾಧ್ಯಮಗಳ ಆಕರ್ಷಣೆಗೆ ಒಳಗಾಗಿ, ಮುದ್ರಣ ಮಾಧ್ಯಮ ಆಯ್ಕೆ ಮಾಡಿಕೊಳ್ಳುವವರು ಕಡಿಮೆ ಆಗಿದ್ದಾರೆ ಎಂದರು.

ಪತ್ರಕರ್ತರಾಗುವವರಿಗೆ ಪತ್ರಿಕೋದ್ಯಮ ಪ್ಯಾಷನ್, ಸಾಮಾಜಿಕ ಜವಾಬ್ದಾರಿ ಇರಬೇಕು. ಗಡಿಯಲ್ಲಿ ಯೋಧ ಕೆಲಸ ಮಾಡುವ ಮನೋಭಾವದ ರೀತಿ ಪತ್ರಕರ್ತ ಕೆಲಸ ಮಾಡಬೇಕಾಗುತ್ತದೆ ಎಂದರು.

ಬಳಿಕ ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗ 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ವಿಭಾಗದ ವತಿಯಿಂದ ರಾಜ್ಯ ಮಟ್ಟದ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ನಾನಾ ಕಾಲೇಜುಗಳಿಂದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಇದೇ ವೇಳೆ ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಎನ್. ಉಷಾರಾಣಿ, ಪ್ರೊ.ಬಿ.ಪಿ. ಮಹೇಶ್ ಚಂದ್ರಗುರು, ಪ್ರೊ.ಕೆ.ಜೆ. ಜೋಸೆಫ್, ಪ್ರೊ.ಜಿ.ಪಿ. ಶಿವರಾಮ, ಪ್ರೊ.ಆರ್.ಎನ್. ಪದ್ಮನಾಭ, ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ರಮೇಶ್ ಉತ್ತಪ್ಪ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್. ಸಪ್ನ, ಅತಿಥಿ ಉನ್ಯಾಸಕರಾದ ಡಾ.ಕೆ.ಎಸ್. ಕುಮಾರಸ್ವಾಮಿ, ಡಾ. ನವೀನ್, ಸಂಶೋಧನಾ ವಿದ್ಯಾರ್ಥಿಗಳಾದ ರಾಕೇಶ್, ಸಂಜಯ್, ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net