ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಆದ್ಯತೆ

6 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಆರೋಗ್ಯ ಸೇವೆಗಳ ಉನ್ನತೀಕರಣಗೊಳಿಸಲು ಮತ್ತು ಎಲ್ಲ ಆಸ್ಪತ್ರೆಗಳನ್ನು ವಿವಿಧ ಹಂತಗಳಲ್ಲಿ ಮೇಲ್ದರ್ಜೆಗೆ ಏರಿಸಲು ಆದ್ಯತೆ ನೀಡಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ನಗರದ ಜಿಲ್ಲಾ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ವಿವಿಧ ವಾರ್ಡ್‌ಗಳ ಸೌಲಭ್ಯ ವೀಕ್ಷಿಸಿದ ಬಳಿಕ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಆಸ್ಪತ್ರೆ ಗುಣಮಟ್ಟ ಕಾಯ್ದುಕೊಂಡಿದ್ದು, ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಜಿಲ್ಲಾ ಆಸ್ಪತ್ರೆ ಮೂಲ ಸೌಕರ್ಯ ಹಾಗೂ ಆರೋಗ್ಯ ಪರಿಕರಗಳ ಸೌಲಭ್ಯಕ್ಕೆ 9.9 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಅನುಮೊದನೆ ನೀಡಲಾಗಿದೆ ಎಂದರು.
ಜಿಲ್ಲಾ ಆಸ್ಪತ್ರೆ ಜತೆಗೆ ವೈದ್ಯಕೀಯ ಕಾಲೇಜು ಮಂಜೂರಾದರೆ ಅಗತ್ಯ ಸೌಲಭ್ಯವಿರುವ ವಿಸ್ತಾರ ಜಾಗ ಬೇಕಾಗುತ್ತದೆ. ಅದಕ್ಕಾಗಿ ಹೆಚ್ಚಿನ ಭೂಮಿ ಇರುವ ಪ್ರದೇಶ ಗುರುತಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲಿ ವರೆಗೆ ಈ ಆಸ್ಪತ್ರೆ ಸುಧಾರಣೆಗೆ ಅಗತ್ಯ ಅನುದಾನ ಪೂರೈಸಲಾಗುವುದು. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ರೋಗಗಳ ಕುರಿತು ಹಾಗೂ ಕ್ಷಯ ರೋಗದ ಕುರಿತು ಸರಿಯಾದ ಕ್ರಮದಲ್ಲಿ ಸ್ಕಾೃನಿಂಗ್ ಮಾಡಬೇಕು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮವಹಿಸಬೇಕು ಎಂದರು.
ಇದಕ್ಕೂ ಪೂರ್ವದಲ್ಲಿ ಜಿಲ್ಲಾ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ಉಪಕರಣಗಳ ಸುಸ್ಥಿತಿ, ಆಸ್ಪತ್ರೆಗೆ ಬಂದ ರೋಗಿಗಳ, ಬಂಧುಗಳ ಅಭಿಪ್ರಾಯ ಪಡೆದರು. ಆಕ್ಸಿಜನ್ ಪ್ಲಾಂಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದ ಸಚಿವರು, ವಾರದಲ್ಲಿ ಒಂದು ಸಲ ಅಥವಾ ಅಗತ್ಯವಿದ್ದಾಗ ಪ್ಲಾಂಟ್ ಆಕ್ಸಿಜನ್ ಬಳಸಬೇಕು ಎಂದು ಸೂಚಿಸಿದರು.
ಬಳಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಔಷಧಿ ವಿತರಣಾ ವಿಭಾಗ, ಹೆರಿಗೆ ಕೊಠಡಿ, ಪ್ರಸವ ಪೂರ್ವ ಗರ್ಭಿಣಿಯರ ಕೊಠಡಿ, ಶಸ್ತ್ರ ಚಿಕಿತ್ಸಾ ಸಂಕೀರ್ಣಗಳಿಗೆ ಭೇಟಿ ನೀಡಿ ಫಲಾನುಭವಿಗಳ ಮತ್ತು ಕರ್ತವ್ಯ ನಿರತ ವೈದ್ಯಕೀಯ ಸಿಬ್ಬಂದಿಯಿಂದ ಮಾಹಿತಿ ಪಡೆದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ರಣದೀಪ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸಂಗಪ್ಪ ಗಾಬಿ, ಡಾ. ಸುಜಾತಾ ಹಸವಿಮಠ, ಅಧಿಕಾರಿಗಳು, ವೈದ್ಯರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net