ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ

12 pnh 1 (1)
Published on

ಪಂಚನಹಳ್ಳಿ: ಧಾರ್ಮಿಕ ಕೇಂದ್ರಗಳಿಗಿಂತ ಶಿಕ್ಷಣ ಸಂಸ್ಥೆಗಳು ಹೆಚ್ಚು ಅಭಿವೃದ್ಧಿಯಾಗಬೇಕು ಎಂದು ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.

ಗುಜ್ಜೇನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಂಗನವಾಡಿ ಕಟ್ಟಡದ ಶಂಕುಸ್ಥಾಪನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಎಲ್ಲ ಧರ್ಮದವರು ಒಂದೇ ಕಡೆ ಸೇರುವ ಜಾಗ ಎಂದರೆ ಅದು ಶಿಕ್ಷಣ ಸಂಸ್ಥೆಗಳು ಮಾತ್ರ. ಆದ್ದರಿಂದ ಗ್ರಾಮಗಳಲ್ಲಿ ಶಾಲೆ ಮತ್ತು ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.ಚುನಾವಣೆ ನಂತರ ರಾಜಕೀಯವನ್ನು ಬದಿಗೊತ್ತಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು.ಉದಾತ್ತ ಚಿಂತನೆಗಳಿಗೆ ಜನರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ಆದಿಜಾಂಬವ ಮಠದ ಶ್ರೀಷಡಾಕ್ಷರಮುನಿ ಸ್ವಾಮೀಜಿ ಮಾತನಾಡಿ, ಮನೆ ಮನೆಗೂ ರಾಜಕೀಯ ತಲುಪಿ ಹಳ್ಳಿಗಳು ಹಾಳಾಗುತ್ತಿವೆ. ಅಭಿವೃದ್ಧಿ ವಿಚಾರ ಬಂದಾಗ ರಾಜಕೀಯ ಬದಿಗೊತ್ತಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಅಂಗನವಾಡಿಗಳು ಪ್ರತಿಯೊಬ್ಬರ ಬದುಕನ್ನು ರೂಪಿಸುವ ಭವ್ಯ ಮಂದಿರಗಾಳಾಗಿವೆ ಎಂದು ತಿಳಿಸಿದರು.

ಅಣ್ಣೀಗೆರೆ ಗ್ರಾಪಂ ಅಧ್ಯಕ್ಷ ಗುಜ್ಜೇನಹಳ್ಳಿ ಜಿ.ಡಿ.ಶಂಕರಪ್ಪ ಮಾತನಾಡಿ, ದೇವಸ್ಥಾನಗಳಿಗಿಂತ ಶಿಕ್ಷಣ ಸಂಸ್ಥೆಗಳು ಅಭಿವೃದ್ದಿಯಾಗಬೇಕು.ಈ ಹಿನ್ನಲೆಯಲ್ಲಿ ಗ್ರಾಮದಲ್ಲಿ ವ್ಯವಸ್ಥಿತವಾದ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆ ಜತೆಗೆ ಸರ್ಕಾರದ ಅನುದಾನ ಬಳಸಿ 20 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರ ಸ್ವಾಮೀಜಿ ಆಶೀರ್ವಚನ ನೀಡಿದರು. ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಸಾಣೇಹಳ್ಳಿ ವಿರೂಪಾಕ್ಷಪ್ಪ, ಹಾಸನ ಹಾಲು ಒಕ್ಕೂಟದ ನಿರ್ದೇಶಕ ಟಿ.ಕೆ.ಜಗದೀಶ್, ಕುಳುವ ಸಮಾದ ತಾಲೂಕು ಅಧ್ಯಕ್ಷ ಎ.ಜಿ.ಗಿರೀಶ್, ಯಶಸ್ವಿನಿ ಯೋಗ ಸಂಸ್ಥೆ ಅಧ್ಯಕ್ಷ ಕುಮಾರಪ್ಪ, ಚೌಡಪ್ಪ, ಮುಖಂಡರಾದ ನಿಂಗಪ್ಪ, ಧರಣೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net