

ಮಡಿಕೇರಿ: ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯೊಂದಿಗೆ ಕ್ರೀಡೆಗಳಿಗೂ ಆದ್ಯತೆ ನೀಡಬೇಕೆಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದರು.
ನಗರದ ಜೂನಿಯರ್ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೊಡಗು ಜಿಲ್ಲಾ ಮಟ್ಟದ ಶಾಲಾ ಮಕ್ಕಳ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳ ಕರಾಟೆ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಶಿಕ್ಷಣದಿಂದ ಮಾನಸಿಕ ಬಲ ಮತ್ತು ಕ್ರೀಡೆಯಿಂದ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲೆಯ ಹಿರಿಯ ಹಾಗೂ ಅಂತರರಾಷ್ಟ್ರೀಯ ಕರಾಟೆಪಟು ಜಮ್ಮಡ ಜಯ ಜೋಯಪ್ಪ, ಪ್ರಸ್ತುತ ಕಾಲಘಟ್ಟದಲ್ಲಿ ಹೆಣ್ಣುಮಕ್ಕಳಿಗೆ ತಮ್ಮ ರಕ್ಷಣೆಗಾಗಿ ಕರಾಟೆ ಅತ್ಯವಶ್ಯಕ. ಕರಾಟೆಯನ್ನು ಕರಗತ ಮಾಡಿಕೊಂಡರೆ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಖ್ಯಾತಿ ಗಳಿಸಲು ಅವಕಾಶವಿದೆ ಎಂದರು.
ಶಿಕ್ಷಣ ಇಲಾಖೆ ಕ್ರೀಡಾ ಮುಖ್ಯಸ್ಥ ಡಾ.ಸದಾಶಿವಯ್ಯ ಪಲ್ಲೆದ್ ಮಾತನಾಡಿ, ಇಲಾಖೆ ನಡೆಸುವ ಕ್ರೀಡಾಕೂಟಗಳ ಕುರಿತು ಮಾಹಿತಿ ನೀಡಿದರು.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಸಂಸ್ಥೆಯ ಅಧ್ಯಕ್ಷ ಸೆನ್ಸಾಯಿ ಅರುಣ್, ಮಡಿಕೇರಿ ತಾಲೂಕು ಕ್ರೀಡಾ ಮುಖ್ಯಸ್ಥ ಶ್ರೀನಿವಾಸ್, ಅಖಿಲ ಕರ್ನಾಟಕ ಕರಾಟೆ ಸಂಸ್ಥೆಯ ಕಾರ್ಯದರ್ಶಿ ರೇಖಾ ಬೋಪಣ್ಣ, ಮಾದಾಪುರ ಚನ್ನಮ್ಮ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಚೆಯ್ಯಂಡ ಪವನ್ ಮಂದಪ್ಪ ಉಪಸ್ಥಿತರಿದ್ದರು.
ಮೈಸೂರು ಕರಾಟೆ ಅಸೋಸಿಯೇಷನ್‌ನ ಸೆನ್ಸಾಯಿ ದೀಪಕ್ ಹಾಗೂ ತಂಡ ಪಂದ್ಯಾವಳಿಯ ತೀರ್ಪುಗಾರಿಕೆ ನಡೆಸಿಕೊಟ್ಟರು. ಕೊಡಗು ಕರಾಟೆ ತರಬೇತುದಾರ ಸೆನ್ಸಾಯಿ ಕಾವೇರಿ ಹಾಗೂ ಸೆನ್ಸಾಯಿ ಕನ್ನಿಕೆ ಪ್ರಾರ್ಥಿಸಿದರು. ಕೊಡಗು ಕರಾಟೆ ಅಸೋಸಿಯೇಷನ್‌ನ ಸಂಯೋಜಕ ಮಾದೇಟಿರ ಪಿ.ತಿಮ್ಮಯ್ಯ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.