ಮಣ್ಣಿನ ಫಲವತ್ತತೆಗೆ ಆದ್ಯತೆ ನೀಡಿ

25 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಚೀನಾಗಿಂತ ಎರಡು ಪಟ್ಟು ಕೃಷಿ ಭೂಮಿ ನಮ್ಮ ದೇಶದಲ್ಲಿದೆ. ಅಲ್ಲಿನ ರೈತರು ಯಾವುದೇ ಬೆಳೆಯನ್ನು ಎಕರೆಗೆ ಶೇ. 100ರಷ್ಟು ಬೆಳೆದರೆ ನಮ್ಮಲ್ಲಿ ರೈತರು ಶೇ. 33ರಷ್ಟು ಬೆಳೆಗಳನ್ನು ಮಾತ್ರ ಬೆಳೆಯುತ್ತಿದ್ದಾರೆ. ಇದಕ್ಕೆ ಕಾರಣ ಅವೈಜ್ಞಾನಿಕ, ಬೇಕಾಬಿಟ್ಟಿಯಾಗಿ ಬೆಳೆಗಳನ್ನು ಬೆಳೆಯುತ್ತಿರುವುದು ಎಂದು ಕೃವಿವಿ ನಿವೃತ್ತ ಕುಲಪತಿ ಡಾ. ಬಿ.ಎಸ್. ಜನಗೌಡರ ಅಭಿಪ್ರಾಯಪಟ್ಟರು.
ನಗರದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ರೈತರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಈ ಸತ್ಯವನ್ನು ಅರಿತು ಯಾವ ಬೆಳೆಗೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ಕೊಟ್ಟು ನೀರಿನ ಮಿತವ್ಯಯ ಮತ್ತು ಮಣ್ಣಿನ ಫಲವತ್ತತೆ ಕಾಪಾಡಬೇಕು ಎಂದರು.
ಉದ್ಯಮಿಗಳು ತಮ್ಮ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿಪಡಿಸಬಹುದು. ಆದರೆ ರೈತ ತನ್ನ ಬೆಳಗೆ ಬೆಲೆ ನಿಗದಿಪಡಿಸುವ ಅವಕಾಶ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತರಲು ಉದ್ದೇಶಿಸಿದ್ದ ಕೃಷಿ ಸಂಬಂಧಿತ ಕಾಯಿದೆಗಳಿಗೆ ತಿದ್ದುಪಡಿ ವಿಚಾರ ಸಂಸತ್ತಿನಲ್ಲಿ ಬಿದ್ದು ಹೋಗಿದ್ದು ವಿಷಾದನೀಯ. ಈ ಮಸೂದೆಗಳ ಉದ್ದೇಶವನ್ನು ದೇಶದ ಜನರು ಅದರಲ್ಲೂ ರೈತರು ಅರ್ಥ ಮಾಡಿಕೊಳ್ಳದಿರುವುದು ಸರಿಯಲ್ಲ ಎಂದರು.
ಡಾ. ವಿ.ಐ. ಬೆಣಗಿ ಮಾತನಾಡಿ, ರೈತರು ಹೊಲಗಳಿಗೆ ಬೇಕಾದ ಬಿತ್ತನೆ ಬೀಜಗಳನ್ನು ತಾವೇ ಸಿದ್ಧಪಡಿಸಬೇಕು. ಮೊಬೈಲ್, ಇಂಟರ್‌ನೆಟ್‌ಗಳಲ್ಲಿ ಕೃಷಿ ಹಾಗೂ ಕೃಷಿ ಮಾರುಕಟ್ಟೆ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಿದೆ. ರೈತರು ಈ ಬಾರಿಯ ರೈತರ ದಿನದ ಘೋಷವಾಕ್ಯವಾದ ಸ್ಮಾರ್ಟ್ ಕೃಷಿ ಅಳವಡಿಸಿಕೊಂಡು ಸುಸ್ಥಿರ ಕೃಷಿಗೆ ಮುಂದಾಗಬೇಕು ಎಂದರು.
ವಾಲ್ಮಿ ನಿರ್ದೇಶಕ ಪ್ರೊ. ಬಿ.ವೈ. ಬಂಡಿವಡ್ಡರ ಅಧ್ಯಕ್ಷತೆ ವಹಿಸಿದ್ದರು. ಸಿಂಗಟಾಲೂರು ಏತ ನೀರಾವರಿ ಯೋಜನೆ ವ್ಯಾಪ್ತಿಯ ರೈತರು ಹಾಗೂ ನವಲಗುಂದ ತಾಲೂಕಿನ ರೈತರು ಪಾಲ್ಗೊಂಡಿದ್ದರು. ನೀರು ಮತ್ತು ಮಣ್ಣಿನ ಫಲವತ್ತತೆ ಕಾಪಾಡುವ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ಬಸವರಾಜ ಪೂಜಾರ ಸ್ವಾಗತಿಸಿದರು. ಆಶಾ ಬೀ ನಿರೂಪಿಸಿದರು. ಇಂದೂಧರ ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net