ಸ್ವಾವಲಂಬಿ ಬದುಕಿಗೆ ಆದ್ಯತೆ ನೀಡಿ

SWAMIJI
Published on

ಮುಂಡರಗಿ: ಮಹಿಳೆಯರು ಧಾರ್ಮಿಕ ಆಚರಣೆಗಳಲ್ಲಿ ತೊಡಗುವುದರಿಂದ ಕುಟುಂಬ ಸದಸ್ಯರಿಗೆ ಹಾಗೂ ಮಕ್ಕಳಿಗೆ ಒಳ್ಳೆಯ ಸಂಸ್ಕಾರಕ್ಕೆ ದಾರಿ ಮಾಡಿಕೊಡುತ್ತದೆ. ಸ್ತ್ರೀಯರು ಉದ್ಯೋಗದ ಕಡೆಯೂ ಗಮನ ಹರಿಸಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಹೇಳಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಕಲ್ಯಾಣಮಂಟಪದಲ್ಲಿ ಜಗದ್ಗುರು ಅನ್ನದಾನೀಶ್ವರ ಅಕ್ಕನ ಬಳಗದಿಂದ ಇತ್ತೀಚೆಗೆ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಭಾರತವು ಮಹಿಳೆಯರಿಗೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದು, ಮಾತೃದೇವೋ ಭವ ಎನ್ನುವ ಪೂಜನೀಯ ಭಾವವನ್ನು ಸಮರ್ಪಿಸಿದೆ ಎಂದರು.

ಹೊಳಲು ವಿರಕ್ತಮಠದ ಅಕ್ಕನಬಳಗದ ಅಧ್ಯಕ್ಷೆ ಶಾರದಾ ವೆಂಕಟಾಪೂರ ಮಾತನಾಡಿ, ಲಿಂಗ ತಾರತಮ್ಯ ಹೋಗಲಾಡಿಸಿ, ಸಮಾನತೆಯ ಸಂದೇಶ ಸಾರಿದವರು ಸಾವತ್ರಿಭಾಯಿ ಪುಲೆ ಅವರು. ಭಾರತದ ಮೊದಲ ಮಹಿಳಾ ಶಿಕ್ಷಕಿಯಾಗುವ ಮೂಲಕ ಮಹಿಳಾ ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟು ಆದರ್ಶರಾಗಿದ್ದಾರೆ ಎಂದರು.

ಕನ್ನಿಕಾ ಪರಮೇಶ್ವರಿ ಮಹಿಳಾ ಮಂಡಳ ಅಧ್ಯಕ್ಷೆ ಸ್ವಾತಿ ಅಳವಂಡಿ ಮಾತನಾಡಿ, ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ಮತ್ತು ಅನ್ಯಾಯಗಳ ವಿರುದ್ಧ, ಮಹಿಳಾ ಸಂಘಟನೆಗಳು ಧ್ವನಿ ಎತ್ತಬೇಕು ಎಂದು ಹೇಳಿದರು.

ಜಗದ್ಗುರು ಅನ್ನದಾನೀಶ್ವರ ಅಕ್ಕನಬಳಗದ ಅಧ್ಯಕ್ಷೆ ಲಕ್ಷ್ಮೀದೇವಿ ಬೆಳವಟಗಿಮಠ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಅಕ್ಕನ ಬಳಗದ ಸದಸ್ಯರು ಪ್ರದರ್ಶಿಸಿದ ಹೇಮರೆಡ್ಡಿ ಮಲ್ಲಮ್ಮಳ ರೂಪಕ ಎಲ್ಲರ ಗಮನ ಸೆಳೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವೇ.ಚೆನ್ನವೀರಯ್ಯಸ್ವಾಮಿ ಹಿರೇಮಠ ಉಪಸ್ಥಿತರಿದ್ದರು. ಅಕ್ಕನ ಬಳಗದ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ಜ್ಯೋತಿ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸರಸ್ವತಿ ಎನ್‌ಎಚ್‌ಎಂ ವರದಿ ವಾಚಿಸಿದರು. ಶಕುಂತಲಾ ಹಂಪಿಮಠ ಹಾಗೂ ಶ್ವೇತಾ ಹಿರೇಮಠ ನಿರೂಪಿಸಿದರು. ಸಂಗೀತಾ ಕೊರಡಕೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net