

ವಿಜಯಪುರ: ಕಂದಾಯ ಗ್ರಾಮಗಳ ರಚನೆಗೆ ಸರ್ಕಾರ ವಿಶೇಷ ಆಸಕ್ತಿ ವಹಿಸಿದ್ದು, ಈ ನಿಟ್ಟಿನಲ್ಲಿ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆಗೆ ಕ್ರಮ ವಹಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಂದಾಯ ಗ್ರಾಮಗಳಲ್ಲಿರುವ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಪಹಣಿ ತಿದ್ದುಪಡಿ, ಮೋಜಣಿ, ಸರ್ವೆ ಕಾರ್ಯವನ್ನು ಸರಳೀಕರಣಗೊಳಿಸಬೇಕು. ಆಧಾರ್ ಕಾರ್ಡ್‌ನೊಂದಿಗೆ ಆರ್‌ಟಿಸಿ ಲಿಂಕ್ ಮಾಡಲು ಕ್ರಮ ವಹಿಸಬೇಕು. ಕಂದಾಯ ಇಲಾಖೆ ನ್ಯಾಯಾಲಯ ಪ್ರಕರಣಗಳನ್ನು ಆದಷ್ಟು ಬೇಗನೆ ವಿಲೇವಾರಿಗೆ ಕ್ರಮ ವಹಿಸುವಂತೆ ಸಂಬಂಧಿಸಿದ ಉಪವಿಭಾಗಾಧಿಕಾರಿ-ತಹಸೀಲ್ದಾರ್‌ರಿಗೆ ಸೂಚಿಸಿದರು.
ಸರ್ಕಾರಿ ಭೂಮಿ ಸಂರಕ್ಷಣೆಯ ಲ್ಯಾಂಡ್ ಬೀಟ್ ತಂತ್ರಾಂಶ, ಕೆರೆ ಸಂರಕ್ಷಣೆ, ನಮೂನೆ 50, 53, 57 ವಿಲೇವಾರಿ, ಸಾಮಾಜಿಕ ಭದ್ರತಾ ಯೋಜನೆ ಪ್ರಗತಿ, ಭೂಸ್ವಾಧೀನ ಪ್ರಕ್ರಿಯೆ ಪ್ರಗತಿ, ಎಜೆಎಸ್‌ಎಸ್‌ಕೆ ಪ್ರಗತಿ, ಸಿ.ಎಂ. ಜನಸ್ಪಂದನ ಹಾಗೂ ಐಪಿಜಿಆರ್‌ಎಸ್ ಪ್ರಕರಣಗಳ ವಿಲೇವಾರಿ, ರೈತರ ಆತ್ಮಹತ್ಯೆ ಪ್ರಕರಣ ವಿಲೇವಾರಿ, ಸಿಸಿಎಂಎಸ್ ಪ್ರಕರಣ ವಿಲೇವಾರಿ, ಅಭಿಲೇಖಾಲಯ ದಾಖಲೆಗಳ ಗಣಕೀಕರಣ, ಇ-ಆಫೀಸ್ ಅನುಷ್ಠಾನ, ಭೂ ಕಂದಾಯ ಬಾಕಿ, ಭೂಮಾಪನ ಇಲಾಖೆ ಪ್ರಗತಿ ಸೇರಿದಂತೆ ವಿವಿಧ ವಿಷಯಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ವಿಜಯಪುರ ಉಪವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ಭೂಮಾಪನ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುಳಗುಂದ ಮತ್ತಿತರರಿದ್ದರು.