

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಹಯೋಗದಲ್ಲಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ರಾಷ್ಟ್ರೀಯ ಬಾಹ್ಯಾಕಾಶ ದಿನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಇಸ್ರೋ ನಿವೃತ್ತ ವಿಜ್ಞಾನಿ ಸುಧೀಂದ್ರ ಬಿಂದಗಿ ಮಾತನಾಡಿ, ಚಂದ್ರಯಾನ-3ರ ಉಡಾವಣೆ, ಉಡಾವಣೆಗೆ ಎದುರಿಸಿದ ಸವಾಲುಗಳು, ಅವುಗಳನ್ನು ಮೀರಿ ಸಲವಾದ ಬಗ್ಗೆ ಹಾಗೂ ಚಂದ್ರಯಾನ-3ರ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ಸಮಗ್ರ ಮಾಹಿತಿ ನೀಡಿದರು.
ಪ್ರೊ. ಬಿ.ಜಿ. ಮೂಲಿಮನಿ ಮಾತನಾಡಿ, ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಡಾ. ವಿಕ್ರಂ ಸಾರಾಭಾಯಿ ಪಾತ್ರ ಮಹತ್ವದ್ದು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಕೊಡುಗೆ ಅಪಾರ. ಪ್ರಸ್ತುತ ದಿನಗಳಲ್ಲಿ ಎಲ್ಲ ವಿಷಯಗಳಲ್ಲಿ ಸ್ಪರ್ಧೆಗಳು ಹೆಚ್ಚಾಗಿದ್ದು, ಅವುಗಳಲ್ಲಿ ಜಯಿಸಿ ಉನ್ನತ ಸ್ಥಾನ ಕಂಡುಕೊಂಡು ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಉತ್ತಮ ಸಂಶೋಧನೆ ಮಾಡುವತ್ತ ಶ್ರಮ ವಹಿಸಬೇಕು ಎಂದರು.
ಆಕಾಶವಾಣಿ ಕೇಂದ್ರದ ನಿರ್ದೇಶಕ ಶರಣಬಸವ ಚೋಳಿನ್ ಮಾತನಾಡಿ, ವಿದ್ಯಾರ್ಥಿಗಳು ರಾಷ್ಟ್ರೀಯ ಬಾಹ್ಯಾಕಾಶ ದಿನದ ಮಹತ್ವ ಅರಿಯಬೇಕು. ಸಾಮಾಜಿಕ ಜಾಲ ತಾಣ ಹಾಗೂ ಇಂಟರ್ನೆಟ್ನಲ್ಲಿ ಇಂತಹ ವಿಷಯಗಳ ಕುರಿತು ಹೆಚ್ಚಿನ ಚರ್ಚೆ ಮತ್ತು ಹುಡುಕಾಟ ನಡೆಸಿದರೆ ವಿಜ್ಞಾನ ಮತ್ತು ತಂತ್ರಜ್ಞಾನ ಇನ್ನಷ್ಟು ಬೆಳವಣಿಗೆಯಾಗುವುದರ ಜತೆಗೆ ವಿದ್ಯಾರ್ಥಿಗಳಿಗೂ ಅನುಕೂಲ ಎಂದರು.
ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ಬೋಳಿಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಯಾಪುರ ಕೆಎಲ್ಇ ಪ್ರೌಢಶಾಲೆಯ ಚೇತನಾ ಖಾನಗೌಡರ, ಶಾಂತಿ ಸದನ ಶಾಲೆಯ ಸಮರ್ಥ ಹುಬ್ಬಳ್ಳಿ (ಪ್ರ), ಸರ್ಕಾರಿ ಪ್ರೌಢ ಶಾಲೆಯ ದ್ಯಾಮಪ್ಪ ಮೂಲಿಮನಿ, ಪವನ ಆಂಗ್ಲ ಮಾಧ್ಯಮ ಶಾಲೆಯ ವಿನಯ ನವಲಗುಂದ (ದ್ವಿ), ಬಾಲ ಬಳಗ ಶಾಲೆಯ ಅಶುತೋಷ, ಸರ್ಕಾರಿ ಪ್ರಾಥಮಿಕ ಶಾಲೆಯ ಚನ್ನಮ್ಮ ಕರಿಗಾರ (ತೃ) ಸ್ಥಾನ ಪಡೆದರು.
ಪ್ರತಿಭಾ, ಉಷಾದೇವಿ ಪ್ರಗುಣನ್, ಮನೋಹರ ಗೋವಿಂದರೆಡ್ಡಿ, ಉಪನ್ಯಾಸಕರು, ಇತರರು ಇದ್ದರು. ಚಂದ್ರಕಾಂತ ಚಂಡೂರ ನಿರೂಪಿಸಿದರು.