

ಗೋಣಿಕೊಪ್ಪ: ಸಬ್ಸಿಡಿ ನಿರೀಕ್ಷಿಸದೆ ಗುಣಮಟ್ಟದ ಆಹಾರದ ಉತ್ಪಾದನೆ ಮೂಲಕ ಪ್ರೋತ್ಸಾಹ ಧನ ಪಡೆಯಲು ರೈತರು ಉತ್ಸಾಹ ತೋರಬೇಕು ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ ಸಲಹೆ ನೀಡಿದರು.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಕೃಷಿ ಪರಿಕರ ಮಾರಾಟಗಾರರ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೊಮಾ ತರಬೇತಿ ಪಡೆದ ಸಿಬ್ಬಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಹಸಿದವನಿಗೆ ಅನ್ನ ನೀಡುವ ಕೃಷಿಕ ಸಬ್ಸಿಡಿ ಪಡೆಯುವ ಪದ್ಧತಿಯಿಂದ ದೂರ ಉಳಿಯಬೇಕು. ಸರ್ಕಾರದಿಂದ ಪ್ರೋತ್ಸಾಹ ಧನ ಪಡೆಯಲು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಆ ಮೂಲಕ ಆದಾಯ ದ್ವಿಗುಣಗೊಳಿಸಿಕೊಳ್ಳುವ ಕನಸನ್ನು ನನಸು ಮಾಡಿಕೊಳ್ಳಬೇಕು ಎಂದರು.
ಕೃಷಿ ಚಟುವಟಿಕೆ ಕಡಿಮೆಯಾದರೆ ನೀರು, ಆಹಾರ, ಗಾಳಿಗಾಗಿ ಯುದ್ಧ ಆರಂಭವಾಗುತ್ತದೆ. ಭವಿಷ್ಯದಲ್ಲಿ ಕೃಷಿಯಲ್ಲಿ ಹೆಚ್ಚಿನ ಮಾರ್ಪಾಡು ಕಾಣಬಹುದಾಗಿದ್ದು, ಬೇಡಿಕೆ ಕೂಡ ಹೆಚ್ಚಾಗಲಿದೆ. ಆ ಮೂಲಕ ಆಹಾರ ಉದ್ಯಮಕ್ಕೆ ಪ್ರೋತ್ಸಾಹ ಸಿಗಲಿದೆ ಎಂದ ಅವರು, ಹವಾಮಾನ ವೈಪರೀತ್ಯ ವಿಶ್ವಮಟ್ಟದ ಸಮಸ್ಯೆಯಾಗಿರುವುದರಿಂದ ಕೃಷಿಯಿಂದ ದೂರ ಉಳಿಯಲು ಪ್ರಯತ್ನಿಸಬಾರದು. ಬದಲಾಗಿ ಪಶ್ಚಿಮಘಟ್ಟ ಪ್ರದೇಶದಿಂದ ಜಗತ್ತಿಗೆ ಉತ್ತಮ ಕೃಷಿಯ ಸಂದೇಶ ನೀಡಬೇಕು ಎಂದು ಹೇಳಿದರು.
ಕೃಷಿ ಪರಿಕರ ಮಾರಾಟಗಾರ ಡಾ.ಜಿ.ಆರ್.ಪೆನ್ನೋಬಳ ಸ್ವಾಮಿ ಮಾತನಾಡಿ, ತಾವು ನೀಡಿರುವ ಪರಕರಗಳಿಂದ ಆಗುತ್ತಿರುವ ಬದಲಾವಣೆಯನ್ನು ಅರಿಯಲು ಕೃಷಿ ಪರಿಕರ ಮಾರಾಟಗಾರರು ಕ್ಷೇತ್ರ ಭೇಟಿಗೆ ಮುಂದಾಗಬೇಕು. ಆ ಮೂಲಕ ಕೃಷಿಕನ ಆರ್ಥಿಕ ವ್ಯವಸ್ಥೆ, ಗುಣಮಟ್ಟದ ಕೃಷಿಗೆ ಪ್ರೋತ್ಸಾಹ ನೀಡುವಂತಾಗಬೇಕು ಎಂದರು.
ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಡಾ.ಕೆ.ರಾಜು ಮಾತನಾಡಿ, ಮಾರಾಟಗಾರರು ಕೃಷಿಕನಿಗೆ ಗುಣಮಟ್ಟದ ವಸ್ತುಗಳನ್ನು ನೀಡಬೇ ಕಿದೆ. ಕೃಷಿಕ ನೇರವಾಗಿ ಮಾರಾಟಗಾರರ ಸಲಹೆ ಪಡೆದು ಖರೀದಿಗೆ ಮುಂದಾಗುವುದರಿಂದ ಗುಣಮಟ್ಟದ ವಸ್ತುಗಳನ್ನು ನೀಡಬೇಕು ಎಂದರು.
ಕೆವಿಕೆ ಮುಖ್ಯಸ್ಥ ಡಾ. ಸಾಜು ಜಾರ್ಜ್ ಮಾತನಾಡಿ, ಮಾರಾಟಗಾರರು ತರಬೇತಿ ಪಡೆಯುವುದರಿಂದ ಕೃಷಿ ವಲಯದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಬಹುದು. ಇವರಿಂದ ದೊರೆಯುವ ಸಲಹೆ ಕೃಷಿಯಲ್ಲಿ ವೈಜ್ಞಾನಿಕವಾಗಿ ಬದಲಾವಣೆ ತರಲಿದೆ ಎಂದರು.
ತರಬೇತಿ ಪಡೆದ 40 ಮಾರಾಟಗಾರರಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು. ಯೋಜನೆ ಸಂಚಾಲಕ ಡಾ. ವೀರೇಂದ್ರಕುಮಾರ್, ವಿಜ್ಞಾನಿಗಳಾದ ಡಾ. ಪ್ರಭಾಕರ್, ಡಾ. ದೇವಯ್ಯ ಇದ್ದರು.