

ಬೆಂಗಳೂರು: ನಗರದ ಪ್ರಮುಖ ಸಂಚಾರ ಮಾರ್ಗವಾಗಿರುವ ವರ್ತುಲ ರಸ್ತೆಯನ್ನು ಸುಸ್ಥಿತಿಯಲ್ಲಿಡುವಂತೆ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಿಂಗ್ ರಸ್ತೆಯ ವಿವಿಧ ಸ್ಥಳಗಳಿಗೆ ಸೋಮವಾರ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲನೆ ನಡೆಸಿದ ಬಳಿಕ ಅವರು ಅಧಿಕಾರಿಗಳಿಗೆ ಈ ನಿರ್ದೇಶನ ನೀಡಿದರು.
ಹೆಬ್ಬಾಳ ಜಂಕ್ಷನ್ ಕೆಳಭಾಗದಲ್ಲಿ ವೆಟ್ ಮಿಕ್ಸ್ ಹಾಕಲಾಗಿದ್ದು, ತಕ್ಷಣ ಅದಕ್ಕೆ ಡಾಂಬರೀಕರಣ ಮಾಡಬೇಕು. ಜತೆಗೆ ಪಾದಚಾರಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಹೈ ರೈಸ್ ಪಾದಚಾರಿ ಕ್ರಾಸಿಂಗ್ ನಿರ್ಮಿಸಲು ಕಾರ್ಯಯೋಜನೆ ರೂಪಿಸಬೇಕು. ಹೆಬ್ಬಾಳ ಜಂಕ್ಷನ್‌ನಲ್ಲಿ ಪೊಲೀಸ್ ಠಾಣೆಯ ಬಳಿಕ ಬಸ್ ನಿಲ್ದಾಣಕ್ಕಾಗಿ ಮೀಸಲಿಟ್ಟಿರುವ ಜಾಗ ಉಪಯೋಗವಾಗದೇ ಇರುವುದನ್ನು ಗಮನಿಸಿ, ಆ ಜಾಗದಲ್ಲಿ ಏನು ಮಾಡುವುದು ಸೂಕ್ತ ಎಂಬುದನ್ನು ಪರಿಶೀಲಿಸಿ, ಅದರ ವಿನ್ಯಾಸ ರೂಪಿಸಿ ಅನುಷ್ಠಾನಕ್ಕೆ ತರಲು ಅಧಿಕಾರಿಗಳಿಗೆ ಸೂಚಿಸಿದರು.
ಭದ್ರಪ್ಪ ಲೇಔಟ್ ಮೇಲ್ಸೇತುವೆ ಬಳಿಯ ಸರ್ವಿಸ್ ರಸ್ತೆ ಹಾಳಾಗಿದ್ದು, ಹೈ ಡೆನ್ಸಿಟಿ ಕಾರಿಡಾರ್ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಇದೇ ಸ್ಥಳದಲ್ಲಿ ಕೆ-ರೈಡ್ ವತಿಯಿಂದ ಕಾಮಗಾರಿ ನಡೆಯುತ್ತಿರುವುದರಿಂದ, ಆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಸರ್ವಿಸ್ ರಸ್ತೆಯ ದುರಸ್ತಿಯನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದರು.
ಬಿಇಎಲ್ ಜಂಕ್ಷನ್ ಅಭಿವೃದ್ಧಿ:
ಬಿಇಎಲ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಬಿಇಎಲ್ ಜಂಕ್ಷನ್‌ನಲ್ಲಿ ರಸ್ತೆ ಮೇಲ್ಮೈ ಹಾಳಾಗಿರುವುದನ್ನು ಗುತ್ತಿಗೆದಾರರಿಂದಲೇ ಮುಚ್ಚಿಸುವಂತೆ ಸೂಚಿಸಿದರು. ಇದೇ ಜಂಕ್ಷನ್‌ನಲ್ಲಿ ಮತ್ತಿಕೆರೆ ಕಡೆಗೆ ಹೋಗುವ ಭಾಗದಲ್ಲಿ ಪಾದಚಾರಿ ಮಾರ್ಗವನ್ನು ಅಗಲೀಕರಣ ಮಾಡಬೇಕು. ವರ್ತುಲ ರಸ್ತೆಯಲ್ಲಿರುವ ಎಲ್ಲ ಗುಂಡಿಗಳನ್ನು ತಕ್ಷಣ ಮುಚ್ಚಬೇಕು. ರಾಜ್‌ಕುಮಾರ್ ಸಮಾಧಿಯಿಂದ ನಾಗರಭಾವಿ ಜಂಕ್ಷನ್‌ವರೆಗಿನ ಸರ್ವಿಸ್ ರಸ್ತೆಗಳಲ್ಲಿರುವ ಗುಂಡಿಗಳನ್ನು ಮತ್ತು ಹಾಳಾದ ಮೇಲ್ಮೈಯನ್ನು ಸರಿಪಡಿಸಬೇಕು. ಗೊರಗುಂಟೆಪಾಳ್ಯ ಕೈಗಾರಿಕಾ ಪ್ರದೇಶದ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ, ಅದನ್ನೂ ಶೀಘ್ರ ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕಂಠೀರವ ಸ್ಟುಡಿಯೋ ಬಳಿ ಸ್ವಚ್ಛತೆ ಕಾಪಾಡಿ:
ರಾಜ್‌ಕುಮಾರ್ ಸಮಾಧಿ ಸ್ಥಳವೂ ಸೇರಿ ಕಂಠೀರವ ಸ್ಟುಡಿಯೋ ಜಂಕ್ಷನ್ ಬಳಿ ಜಲಮಂಡಳಿಯ ಕಾಮಗಾರಿ ನಡೆಯುತ್ತಿದ್ದು, ಒಳಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದನ್ನು ಗಮನಿಸಿ, ಜಲಮಂಡಳಿ ಅಧ್ಯಕ್ಷರಿಗೆ ಸ್ಥಳದಲ್ಲಿಯೇ ಕರೆ ಮಾಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ತಿಳಿಸಿದರು. ಜಂಕ್ಷನ್‌ನಲ್ಲಿ ಸ್ವಚ್ಛತೆ ಕಾಪಾಡದಿರುವುದನ್ನು ಗಮನಿಸಿ, ಡೆಬ್ರೀಸ್ ಹಾಗೂ ಹೂಳನ್ನು ತೆಗೆದು ತಕ್ಷಣ ಸ್ವಚ್ಛತೆ ಕೈಗೊಳ್ಳುವಂತೆ ಮಹೇಶ್ವರ್ ರಾವ್ ಸೂಚಿಸಿದರು.
ತಪಾಸಣೆ ವೇಳೆ ಶಾಸಕ ರವಿ ಸುಬ್ರಮಣ್ಯ, ನಗರಪಾಲಿಕೆಗಳ ಆಯುಕ್ತರಾದ ಪಿ. ಸುನೀಲ್ ಕುಮಾರ್, ಡಾ. ಕೆ.ವಿ.ರಾಜೇಂದ್ರ, ಜಂಟಿ ಆಯುಕ್ತರಾದ ಮೊಹಮ್ಮದ್ ನಯೀಮ್ ಮೊಮಿನ್, ಮುಖ್ಯ ಅಭಿಯಂತರಾದ ರಾಘವೇಂದ್ರ ಪ್ರಸಾದ್, ರಾಜೇಶ್, ರಂಗನಾಥ್, ಯಮುನಾ, ಸ್ವಯಂಪ್ರಭಾ ಉಪಸ್ಥಿತರಿದ್ದರು.
ಕಸ ವರ್ಗಾವಣೆ ಘಟಕ ಸ್ಥಳಾಂತರಿಸಿ:
ಸುಮನಹಳ್ಳಿ ಜಂಕ್ಷನ್ ಮೇಲ್ಸೇತುವೆ ಕೆಳಭಾಗದಲ್ಲಿರುವ ಕಸ ವರ್ಗಾವಣೆ ಘಟಕದಲ್ಲಿ ಸ್ವಚ್ಛತೆ ಕಾಪಾಡಲಾಗುತ್ತಿಲ್ಲ. ಲೀಚೇಟ್‌ನಿಂದ ದುರ್ವಾಸನೆ ಉಂಟಾಗುತ್ತಿದೆ. ಜೆಟ್ ಸ್ಪ್ರೇಯರ್ ಮೂಲಕ ಸ್ವಚ್ಛಗೊಳಿಸಬೇಕು. ರಾಜಕಾಲುವೆ ಪಕ್ಕದ ಖಾಲಿ ಜಾಗದಲ್ಲಿ ಕಸ ವರ್ಗಾವಣೆಯ ಪರ್ಯಾಯ ವ್ಯವಸ್ಥೆ ಕೈಗೊಳ್ಳಲು ಸೂಚಿಸಲಾಗಿದೆ.
ವೈಟ್ ಟಾಪಿಂಗ್ ಕಾಮಗಾರಿ ತ್ವರಿತಗೊಳಿಸಿ:
ವರ್ತುಲ ರಸ್ತೆಯ ಶ್ರೀನಿವಾಸನಗರದ ಮುತ್ತುರಾಜ್ ರಸ್ತೆಯಿಂದ ವಿದ್ಯಾಪೀಠ ವೃತ್ತದವರೆಗೆ 1.8 ಕಿ.ಮೀ. ಉದ್ದದ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ 1 ಕಿ.ಮೀ. ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಪಾದಚಾರಿ ಮಾರ್ಗ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಉಳಿದ ಭಾಗವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾಮಗಾರಿ ಪೂರ್ಣಗೊಳ್ಳುವವರೆಗೆ ರಸ್ತೆ ಗುಂಡಿಗಳಿಲ್ಲದಂತೆ ಸುಸ್ಥಿತಿಯಲ್ಲಿಟ್ಟು ಕಾರ್ಯಾಚರಿಸಲು ಗುತ್ತಿಗೆದಾರರಿಗೆ ಮುಖ್ಯ ಆಯುಕ್ತರು ಸೂಚಿಸಿದರು.