

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಕೈಗಾರೀಕರಣ, ಸಮಗ್ರ ಯೋಜನೆಯ ಅನುಷ್ಠಾನದ ಮೂಲಕ ಉದ್ಯೋಗಾವಕಾಶ ಸೃಷ್ಟಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಭರವಸೆ ನೀಡಿದರು.
ನಗರದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕಾಮಗಾರಿಯು ಹಲವು ತೊಡಕುಗಳ ಹಿನ್ನೆಲೆಯಲ್ಲಿ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಇದೆಲ್ಲವೂ ನಿವಾರಣೆಯಾಗಿದೆ ಎಂದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಭಾಗವು ಸಮೀಪದಲ್ಲಿರುವುದರಿಂದ ವಿಶೇಷ ಕೈಗಾರಿಕೆಗಳ ಸ್ಥಾಪನೆ, ಉದ್ಯೋಗ ಸೃಷ್ಟಿಗೆ ಪೂರಕವಾದ ಅನುಕೂಲಕರ ವಾತಾವರಣ ಇದೆ. ಇದನ್ನು ಬಳಸಿಕೊಂಡು ಸಮಗ್ರ ಯೋಜನೆ ರೂಪಿಸಲಾಗುವುದು. ಪ್ರವಾಸೋದ್ಯಮ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಶಾಸಕ ಪ್ರದಿಪ್ ಈಶ್ವರ್ ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಂಗದ ಅವಧಿಯಲ್ಲಿ ಅನವಶ್ಯಕವಾಗಿ ಸಮಯವನ್ನು ವ್ಯರ್ಥಬಾರದು. ಗುರು ಹಿರಿಯರಿಗೆ ಗೌರವ ನೀಡುವುದರ ಜತೆಗೆ ಉತ್ತಮ ವಿದ್ಯಾವಂತರಾಗಬೇಕು ಎಂದರು.
ಕಾಲೇಜು ಶಿಣ ಇಲಾಖೆಯ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಕೆ.ರಾಮಕೃಷ್ಣ ರೆಡ್ಡಿ, ಜಿ.ಪಂ.ಸಿಇಒ ಪ್ರಕಾಶ್ ನಿಟ್ಟಾಲಿ, ಎಸ್ಪಿ ಡಿ.ಎಲ್.ನಾಗೇಶ್, ಎಡಿಸಿ ಎನ್.ತಿಪ್ಪೇಸ್ವಾಮಿ, ಪ್ರಾಂಶುಪಾಲ ಚಂದ್ರಯ್ಯ ಮತ್ತಿತರರು ಇದ್ದರು.
ನ್ಯಾಕ್ ಸಮಿತಿ ಭೇಟಿ
ಆ.23ರಂದು ಕಾಲೇಜಿನ ಮೂಲ ಸೌಕರ್ಯಗಳು ಹಾಗೂ ಕಲಿಕಾ ಪ್ರಕ್ರಿಯೆಗಳ ಬಗೆ ಪರಿಶೀಲಿಸಲು ನ್ಯಾಕ್ ಸಮಿತಿಯು ಭೇಟಿ ನೀಡುತ್ತಿದೆ. ಈ ನಿಟ್ಟಿನಲ್ಲಿ ತ್ವರಿತವಾಗಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆದು ಕಾಲೇಜು ಉದ್ಘಾಟಿಸಲಾಗಿದೆ. ಕಳೆದ ತಿಂಗಳಿನಲ್ಲಿಯೇ ತಂಡ ಭೇಟಿ ನೀಡಬೇಕಾಗಿತ್ತು. ಆದರೆ, ಇಲ್ಲಿನ ಸಮಸ್ಯೆಗಳನ್ನು ಉನ್ನತ ಶಿಕ್ಷಣ ಸಚಿವರು ಗಮನಕ್ಕೆ ತಂದು ಮುಂದೂಡಿದ್ದರು.
ಸೌಕರ್ಯಗಳ ಮಂಜೂರಾತಿ
ನೂತನ ಕಾಲೇಜಿಗೆ ಪೀಠೋಪಕರಣಗಳು, ಕಂಪ್ಯೂಟರ್ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸುವುದರ ಬಗ್ಗೆ ಸಚಿವರು ಭರವಸೆ ನೀಡಿದರು. ಕಾಲೇಜಿನ ಪೀಠೋಪಕರಣಗಳಿಗಾಗಿ ಈಗಾಗಲೇ 5 ಲ ರೂ.ಗಳನ್ನು ಮಂಜೂರು ಮಾಡಲಾಗಿದೆ. ಇಲ್ಲಿಗೆ 20 ಗಣಕ ಯಂತ್ರಗಳನ್ನು ಪೂರೈಸಬೇಕಾಗಿದ್ದು ಮೊದಲ ಹಂತದಲ್ಲಿ ತ್ವರಿತವಾಗಿ 10 ಗಣಕಯಂತ್ರಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಬಸ್ ಸೇವೆಗೆ ಕ್ರಮ
ನಗರದ ಅಂಬೇಡ್ಕರ್ ವೃತ್ತದಿಂದ ಒಂದೂವರೆ ಕಿ.ಮೀ ದೂರದಲ್ಲಿ ನೂತನ ಕಾಲೇಜು ಕಟ್ಟಡ ತಲೆ ಎತ್ತಿದೆ. ಇದರಿಂದ ಪ್ರತಿದಿನ ವಿದ್ಯಾರ್ಥಿನಿಯರು ನಡೆದುಕೊಂಡು ಬಂದು ಹೋಗಬೇಕು. ಇದಕ್ಕೆ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ಮಾರ್ಗವಾಗಿ ಸಂಚರಿಸುವ ಸಾರಿಗೆ ಸಂಸ್ಥೆಯ ಬಸ್ಗಳು ನಿಲುಗಡೆ, ಸಮಸ್ಯೆ ಇರುವ ಗ್ರಾಮಗಳಿಗೆ ಬಸ್ ಸೌಕರ್ಯ ಒದಗಿಸುವುದರ ಬಗ್ಗೆ ಸಚಿವರು ಭರವಸೆ ನೀಡಿದರು.
ರ್ನಿಲಕ್ಷ ಧೋರಣೆಗೆ ಅಸಮಾಧಾನ
2015ನೇ ಸಾಲಿನಲ್ಲಿ ಭೂಮಿ ಪೂಜೆ ಕಂಡರೂ ನಿಧಾನಗತಿಯಲ್ಲಿ ಕಾಲೇಜಿನ ಕಾಮಗಾರಿ ನಿರ್ವಹಣೆ, ವಿಳಂಬ ಉದ್ಘಾಟನೆಯ ಬಗ್ಗೆ ಕಾರ್ಯಕ್ರಮದಲ್ಲಿಯೇ ಅಸಮಾಧಾನ ವ್ಯಕ್ತವಾಯಿತು. ತ್ವರಿತವಾಗಿ ಕಾಲೇಜು ಉದ್ಘಾಟನೆಗೆ ದೊಡ್ಡ ಸಾಹಸ ಮಾಡಬೇಕಾಗಿರಲಿಲ್ಲ. ಆದರೆ, ಹಿಂದಿನ ಜನಪ್ರತಿನಿಧಿಗಳು ಏಕೆ ಈ ವಿಚಾರವಾಗಿ ರ್ನಿಲಕ್ಷ ಧೋರಣೆ ತೋರಿದರು ಎಂಬುದು ಗೊತ್ತಿಲ್ಲ ಎಂದು ಸಚಿವರಾದಿಯಾಗಿ ಹಲವರು ಸಮಾಧಾನಪಡಿಸಿದರು.