

ಬೀರೂರು: ಪಟ್ಟಣದ ಸ್ವಚ್ಛತೆ ಮತ್ತು ಸ್ವಾಸ್ಥೃ ಕಾಪಾಡುವ ಪೌರಕಾರ್ಮಿಕರು ಪಟ್ಟಣದ ಸೌಂದರ್ಯ ಹೆಚ್ಚಿಸುವಲ್ಲಿ ನೀಡುತ್ತಿರುವ ಸೇವೆ ಅನನ್ಯವಾಗಿದ್ದು, ಸ್ವಚ್ಛತೆ ಜತೆಗೆ ತಮ್ಮ ಆರೋಗ್ಯದ ಕಡೆಯೂ ಗಮನಹರಿಸಬೇಕು ಎಂದು ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿಮನೆ ತಿಳಿಸಿದರು.
ಗಣಪತಿ ಪೆಂಡಾಲ್ ಆವರಣದಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರು ಮತ್ತು ಪುರಸಭೆ ಸಿಬ್ಬಂದಿಯ ನೇತ್ರಾ ಮತ್ತು ಆರೋಗ್ಯ ತಪಾಸಣಾ ಶಿಬಿರ ಮತ್ತು ಆಟೋಟ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೌರ ಕಾರ್ಮಿಕರು ತಮ್ಮ ಕೆಲಸಕ್ಕೆ ಹೆಚ್ಚು ಒತ್ತು ನೀಡುವ ಜತೆಗೆ ತಮ್ಮ ಆರೋಗ್ಯದ ಮೇಲೂ ನಿರ್ಲಕ್ಷೃ ತೋರುತ್ತಿರುವುದು ಸರಿಯಲ್ಲ. ನಮ್ಮೆಲ್ಲರ ಆರೋಗ್ಯ ಸುಸ್ಥಿತಿಯಲ್ಲಿರಲು ವೈದ್ಯರು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಪೌರ ಕಾರ್ಮಿಕರು. ಅವರನ್ನು ಆರೋಗ್ಯಯುತವಾಗಿ ಕಾಪಾಡಿಕೊಳ್ಳುವುದು ಸಾರ್ವಜನಿಕರು ಮತ್ತು ಪುರಸಭೆ ಜವಾಬ್ದಾರಿ. ಕನಿಷ್ಠ ಆರು ತಿಂಗಳಿಗೊಮ್ಮೆಯಾದರೂ ಪೌರಕಾರ್ಮಿಕರನ್ನು ಸಂಪೂರ್ಣ ಆರೋಗ್ಯ ತಪಾಸಣೆಗೆ ಒಳಪಡಿಸುವುದು ಅಗತ್ಯ ಎಂದರು.
ಮುಖ್ಯಾಧಿಕಾರಿ ಜಿ.ಪ್ರಕಾಶ್ ಮಾತನಾಡಿ, ಪೌರ ಕಾರ್ಮಿಕರು ಪುರಸಭೆಯ ಮುಖ್ಯ ಆಧಾರ ಸ್ತಂಭಗಳು. ಅವರ ನೆರವಿಲ್ಲದೇ ಯಾವುದೇ ಕೆಲಸಗಳು ಮತ್ತು ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯವಿಲ್ಲ. ಕೆಲಸದ ಒತ್ತಡದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗಕ್ಕೆ ಅವರ ಮೇಲಿನ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ತಮ್ಮ ಆರೋಗ್ಯದಲ್ಲಿ ಏನಾದರೂ ಏರುಪೇರಾದಲ್ಲಿ ತಕ್ಷಣ ತಪಾಸಣೆಗೆ ಒಳಪಟ್ಟು ಸೂಕ್ತ ಚಿಕಿತ್ಸೆ ಪಡೆಯಬೇಕು. ತಮ್ಮ ಮಕ್ಕಳನ್ನು ಸುಶಿಕ್ಷಿತರಾಗಿಸಲೂ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಸದಸ್ಯರಾದ ಬಿ.ಆರ್.ಮೋಹನ್ಕುಮಾರ್, ಆರೋಗ್ಯಾಧಿಕಾರಿ ವೈ.ಎಂ.ಲಕ್ಷ್ಮಣ್, ಮುಖಂಡರಾದ ಬಾವಿಮನೆ ಮಧು, ಬಿ.ಎಂ.ರುದ್ರಪ್ಪ, ಎಂ.ಐ.ಬಸವರಾಜ್, ಕೃಷ್ಣಮೂರ್ತಿ, ಪುರಸಭೆ ಸಿಬ್ಬಂದಿ, ಹೊರಗುತ್ತಿಗೆ ನೌಕರರು ಇದ್ದರು.