

ಮೂಡಿಗೆರೆ: ಚಾಲಕರು ಸರ್ಕಾರದ ಸಂಚಾರ ನಿಯಮಾನುಸಾರವಾಗಿ ವಾಹನ ಚಲಾಯಿಸಿದರೆ ಅಪಘಾತಗಳಿಂದ ಮುಕ್ತಿ ಹೊಂದಬಹುದು ಎಂದು ಬದ್ರಿಯಾ ಜುಮ್ಮಾ ಮಸೀದಿ ಖತೀಬ್ ಮುಸ್ತಫಾ ಯಮಾನಿ ತಿಳಿಸಿದರು.
ಪಟ್ಟಣದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಶನಿವಾರ ನಡೆದ ಬಕ್ರೀದ್ ಹಬ್ಬದ ಪ್ರಾರ್ಥನೆ ವೇಳೆ ಮಾತನಾಡಿ, ಇತ್ತೀಚಿಗೆ ವಾಹನ ಅವಘಡದಲ್ಲಿ ಯುವಕರು ಹೆಚ್ಚಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬೈಕ್ ಸವಾರರು ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಬಾರದು. ಕಾರು ಚಾಲಕರು ಸೀಟ್‌ಬೆಲ್ಟ್ ಧರಿಸದೆ ಕಾರು ಚಲಾಯಿಸಬಾರದು. ಮಕ್ಕಳಿಗೆ ಬೈಕ್ ಅಥವಾ ಕಾರು ಕೊಡುವುದು ಅಪರಾಧ. ಮಕ್ಕಳು ವಾಹನ ಚಲಾಯಿಸಿದರೆ ಪಾಲಕರು ಸಾವಿರಾರು ರೂ. ದಂಡ ಕಟ್ಟಬೇಕಾಗುತ್ತದೆ. ಮಕ್ಕಳು ವಾಹನ ಚಲಾಯಿಸಿದಾಗ ಅಪಘಾತ ಸಂಭವಿಸಿ ಪ್ರಾಣ ಹಾನಿ ಸಂಭವಿಸಿದರೆ ಅವರ ಕುಟುಂಬ ಜೀವನ ಪೂರ್ತಿ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.
ತ್ಯಾಗ ಬಲಿದಾನದಿಂದ ಕೂಡಿದ ಬಕ್ರಿದ್ ಹಬ್ಬದ ಆಚರಣೆಯಿಂದ ಸಡಗರ, ಸಂಭ್ರಮಕ್ಕಿಂತ ಪ್ರತಿಯೊಬ್ಬರು ಶಿಕ್ಷಣ ಪಡೆದು ಉತ್ತಮ ವ್ಯಕ್ತಿಗಳಾಗಿ ಸಮಾಜದಲ್ಲಿ ಬದುಕಬೇಕು ಎಂಬ ಸಂದೇಶವನ್ನು ಈ ಹಬ್ಬ ಕೊಡುತ್ತದೆ. ಕುರಿಗಳನ್ನು ಬಲಿ ನೀಡಿ ಅದರ ಮಾಂಸವನ್ನು ದಾನ ನೀಡುವುದು ಈ ಹಬ್ಬದ ವಿಶೇಷ ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನದಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳಿಂದ ಬರುವ 25 ರಿಂದ 30 ಲಕ್ಷ ಯಾತ್ರಿಕರು ಹಜ್ ಕರ್ಮವನ್ನು ಪೂರೈಸುತ್ತಾರೆ. ಜೀವನದಲ್ಲಿ ಒಮ್ಮೆಯಾದರೂ ಹಜ್ಕರ್ಮ ಪೂರೈಸುವುದು ಮುಸ್ಲಿಂ ಸಮುದಾಯದಲ್ಲಿ ಕಡ್ಡಾಯವಾಗಿದೆ ಎಂದರು.
ಸುನ್ನಿ, ಎಂ.ಎ.ಕುನ್ನಿ ಮಹಮ್ಮದ್, ಕೆ.ಪಿ.ಖಾಲಿದ್, ಫಿಶ್ ಮೋಣು, ಎ.ಎಂ.ಶರೀಫ್, ಪಿ.ಕೆ.ಹನೀಫ್ ಇದ್ದರು.