

ಕೃಷ್ಣಾ ಮೇಲ್ದಂಡೆ ವ್ಯಾಪ್ತಿಯಲ್ಲಿ ಬರುವ ನಾರಾಯಣಪುರ ಎಡದಂಡೆ ಕಾಲುವೆ (ಎನ್ಎಲ್ಬಿಸಿ) ವಿಸ್ತರಣೆ, ಆಧುನೀಕರಣ ಮತ್ತು ನವೀಕರಣ ಕಾರ್ಯ ಪೂರ್ಣಗೊಂಡಿದ್ದು, ಇಲ್ಲಿ ಅತ್ಯಾಧುನಿಕ ಸ್ವಯಂಚಾಲಿತ ನೀರು ನಿರ್ವಹಣೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಏಷ್ಯಾ ಖಂಡದಲ್ಲಿ ಪ್ರಥಮ ಬಾರಿಗೆ ಕಾರ್ಯಗತಗೊಳಿಸುತ್ತಿರುವ ಸ್ಕಾಡಾ (ಸುಪರ್ವೈಸರಿ ಕಂಟ್ರೋಲ್ ಆಂಡ್ ಡೇಟಾ ಅಪ್ಲಿಕೇಶನ್) ತಂತ್ರಜ್ಞಾನವುಳ್ಳ ಇಂತಹ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ.
ನೀರಾವರಿ ಬಳಕೆ ಸಾಮರ್ಥ್ಯ ಹೆಚ್ಚಿಸುವುದು, ನೀರು ಪೋಲಾಗುವುದನ್ನು ತಡೆಗಟ್ಟುವುದು, ಕಾಲುವೆ ಕೊನೆಯ ಭಾಗದ ರೈತರ ಜಮೀನುಗಳಿಗೂ ಸಮರ್ಪಕವಾಗಿ ನೀರು ಒದಗಿಸುವುದು, ಮುಖ್ಯ ಕಾಲುವೆ ಮತ್ತು ವಿತರಣಾ ಕಾಲುವೆಗಳಲ್ಲಿ ನಿಗದಿತ ಹರಿವಿನ ಪ್ರಮಾಣವನ್ನು ಕಾಯ್ದುಕೊಳ್ಳುವುದು ಮುಂತಾದ ಧ್ಯೇಯೋದ್ದೇಶಗಳೊಂದಿಗೆ ಜಾರಿಗೊಳಿಸುತ್ತಿರುವ ಈ ವ್ಯವಸ್ಥೆಯನ್ನು ಸಮರ್ಪಕವಾಗಿ ಹಾಗೂ ನಿರಂತರವಾಗಿ ನಿರ್ವಹಣೆ ಮಾಡಿದರೆ ಅಚ್ಚುಕಟ್ಟು ಪ್ರದೇಶದ ರೈತರ ಕೃಷಿ ಆದಾಯ ಹೆಚ್ಚಿಸುವಲ್ಲಿ ಬಹುದೊಡ್ಡ ಕೊಡುಗೆ ನೀಡಲಿದೆ. ಸ್ಕಾಡಾ ತಂತ್ರಜ್ಞಾನವನ್ನು ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಅಳವಡಿಸಲಾಗಿದ್ದರೂ ಅದು ಪ್ರಾಯೋಗಿಕವಾಗಿದೆ. ಅಲ್ಲದೆ, ಅಲ್ಪಪ್ರಮಾಣದ್ದಾಗಿದ್ದು, ಕೇವಲ ಒಂದು ಸಾವಿರ ಹೆಕ್ಟೇರ್ ವಿಸ್ತೀರ್ಣ ವ್ಯಾಪ್ತಿಯದ್ದಾಗಿದೆ. ಆದರೆ, ಎನ್ಎಲ್ಬಿಸಿಯ ಸ್ವಯಂಚಾಲಿತ ನೀರು ನಿರ್ವಹಣೆ ವ್ಯವಸ್ಥೆಯ ವ್ಯಾಪ್ತಿ ವಿಶಾಲವಾಗಿದೆ.
ನಾರಾಯಣಪುರ ಎಡದಂಡೆ ಕಾಲುವೆಯ ಅಂತರವು 78 ಕಿ.ಮೀ. ಇದ್ದು, ಯಾದಗಿರಿ, ಕಲಬುರಗಿ, ರಾಯಚೂರ ಮತ್ತು ವಿಜಯಪುರ ಜಿಲ್ಲೆಗಳ 4.5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸುವಂತಹದ್ದಾಗಿದೆ. ಇಲ್ಲಿ ಅತ್ಯುನ್ನತ ಸ್ಕಾಡಾ ತಂತ್ರಜ್ಞಾನ ಅಳವಡಿಕೆಗಾಗಿ 1180 ಕೋಟಿ ರೂಪಾಯಿ ವ್ಯಯಿಸಲಾಗಿದೆ. ನೀರು ಪೋಲಾಗುವುದನ್ನು ನಿಯಂತ್ರಿಸಲು ಸ್ವಯಂಚಾಲಿತವಾದ ಹಾಗೂ ತುಕ್ಕುರಹಿತ ಸ್ಟೇನ್ಲೆಸ್ ಸ್ಟೀಲ್ ಗೇಟ್ಗಳನ್ನು ಅಳವಡಿಸಲಾಗಿದೆ. ಈ ವಿನೂತನ ವ್ಯವಸ್ಥೆ ಅಳವಡಿಕೆ ಕುರಿತಂತೆ ಅನೇಕ ರಾಜ್ಯಗಳು ಈಗಾಗಲೇ ಆಸಕ್ತಿ ತೋರಿಸಿವೆ.
ಕಲಬುರಗಿ, ಬೀದರ, ರಾಯಚೂರ, ವಿಜಯಪುರ ಸೇರಿದಂತೆ ಕಲ್ಯಾಣ ಕರ್ನಾಟಕದ ಐದು ಜಿಲ್ಲೆಗಳಲ್ಲಿನ ತಾಂಡಾಗಳ 51,900 ಕುಟುಂಬಗಳಿಗೆ ಹಕ್ಕುಪತ್ರ ನೀಡಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಕಲಬುರಗಿ ಜಿಲ್ಲೆಯ ಮಳಖೇಡದಲ್ಲಿ ತಾಂಡಾ ಗ್ರಾಮ ಘೋಷಣೆ ಜತೆಗೆ ಸಾಂಕೇತಿಕವಾಗಿ ಐವರು ಫಲಾನುಭವಿಗಳಿಗೆ ಹಕ್ಕುಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ವಿತರಿಸಿದರು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದನ್ನು ಗಮನದಲ್ಲಿಟ್ಟು ಮತ ಸೆಳೆಯುವ ಉದ್ದೇಶದಿಂದ ಸರ್ಕಾರ ಇಂತಹ ಹೆಜ್ಜೆ ಇಟ್ಟಿದೆ ಎಂಬ ಟೀಕೆಗಳು ವ್ಯಕ್ತವಾದರೂ ಹಿಂದುಳಿದ ಲಂಬಾಣಿ ಸಮುದಾಯದ ಬಡಕುಟುಂಬಗಳ ಬದುಕಿಗೆ ಬಹುದೊಡ್ಡ ಆಸರೆಯನ್ನು ಈ ಕ್ರಮ ಒದಗಿಸಲಿದೆ. ತಾಂಡಾ, ಮಜರೆ, ದೊಡ್ಡಿ, ಪಾಳ್ಯ, ಕ್ಯಾಂಪ್ ಕಾಲನಿಗಳು ಕಂದಾಯ ಗ್ರಾಮದ ವ್ಯಾಪ್ತಿಗೆ ಬಾರದ ಕಾರಣ ಮೂಲಸೌಕರ್ಯ ಅಭಿವೃದ್ಧಿಯಿಂದ ವಂಚಿತವಾಗಿರುತ್ತವೆ. ಕಂದಾಯ ಗ್ರಾಮವಾಗಿ ಪರಿವರ್ತಿತವಾದರೆ ವಾಸದ ಹಕ್ಕುಪತ್ರ ದೊರೆತು ಜೀವನ ಭದ್ರತೆ ಲಭಿಸುತ್ತದೆ. ಜತೆಗೆ, ವಸತಿ ಯೋಜನೆ ಸೇರಿದಂತೆ ಅನೇಕ ಸರ್ಕಾರಿ ಸೌಲಭ್ಯಗಳು, ಮೂಲಸೌಕರ್ಯಗಳು ಅಲ್ಲಿನ ಜನರಿಗೆ ಲಭಿಸುತ್ತವೆ. ಅಭಿವೃದ್ಧಿಯ ಕಂಪು ಎಲ್ಲೆಡೆ ಪಸರಿಸುವಂತಾದರೆ, ಸಹಜವಾಗಿ ರಾಜ್ಯ ಮತ್ತು ಒಟ್ಟಾರೆಯಾಗಿ ದೇಶಕ್ಕೂ ಹಿತ. ಯಾವ ಸರ್ಕಾರವಿದ್ದರೂ ಪಕ್ಷಭೇದವಿಲ್ಲದೆ ಇಂಥ ಕಾರ್ಯಗಳು ನಿರಂತರವಾಗಿರಬೇಕು.