ಗ್ರಾಮಗಳಲ್ಲಿ ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಿ

2KDR1
ಕಡೂರರಲ್ಲಿ ಆಯೋಜಿಸಿದ್ದ ಕಲುಷಿತವಾಗದಿರಲಿ ನಮ್ಮ ಜಲ, ಉಳಿಸಿ ಮನುಕುಲ ಕುರಿತು ನೀರುಗಂಟಿಗಳಿಗೆ ನಡೆದ ಕಾರ್ಯಗಾರದಲ್ಲಿ ತಾಪಂ ಇಒ ಸಿ.ಆರ್.ಪ್ರವೀಣ್ ಅಭಿಯಾನದ ಲೋಗೊ ಬಿಡುಗಡೆಗೊಳಿಸಿದರು. ಎಇಇ ರವಿಶಂಕರ್, ಮೋಹನ್, ಮೋಹಿದ್ದೀನ್, ಹರಿರಾಮ್ ಇದ್ದರು.
Published on

ಕಡೂರು: ಗ್ರಾಮಗಳ ಜಲಮೂಲಗಳನ್ನು ಸಂರಕ್ಷಿಸಿ, ಸ್ವಚ್ಛಪರಿಸರ ನಿರ್ಮಾಣಕ್ಕೆ ತಾಲೂಕಿನ ಗ್ರಾಪಂಗಳ ನೀರುಗಂಟಿಗಳು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ಪ್ರವೀಣ್ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಪಂ ಚಿಕ್ಕಮಗಳೂರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಕಲುಷಿತವಾಗದಿರಲಿ ನಮ್ಮ ಜಲ, ಉಳಿಸಿ ಮನುಕುಲ ಕುರಿತು ತಾಲೂಕಿನ ಗ್ರಾಪಂಗಳ ನೀರುಗಂಟಿಗಳಿಗೆ ಆಯೋಜಿಸಿದ್ದ ಕಾರ್ಯಗಾರದಲ್ಲಿ ಅಭಿಯಾನದ ಲೋಗೊ ಬಿಡುಗಡೆಗೊಳಿಸಿ ಮಾತನಾಡಿದರು.
ತಾಲೂಕಿನಾದ್ಯಂತ ಮಳೆ ಪ್ರಮಾಣ ಕಡಿಮೆಯಾಗಿದೆ. ಪ್ರತಿ ಜೀವ ಸಂಕುಲಕ್ಕೆ ಮುಂದಿನ ದಿನಗಳಲ್ಲಿ ಎದುರಾಗುವ ನೀರಿನ ಹಾಹಾಕಾರ ತಡೆಯಲು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಗ್ರಾಮಗಳಲ್ಲಿ ಪೂರೈಕೆಯಾದ ಕುಡಿಯುವ ನೀರು ಕಲುಷಿತವಾಗಿರುವುದು ಕಂಡು ಬಂದರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸುವಂತೆ ಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವಿಶಂಕರ್ ಮಾತನಾಡಿ, ಜಲಸಂರಕ್ಷಣೆ ಕುರಿತು ಅಭಿಯಾನದ ಮೂಲಕ ಗ್ರಾಮಗಳಲ್ಲಿ ನೀರಿನ ಮಹತ್ವದ ಬಗ್ಗೆ ಹೆಚ್ಚು ಜಾಗೃತಗೊಳಿಸಲು ನೀರುಗಂಟಿಗಳು ಮುಂದಾಗಬೇಕು. ಕಲುಷಿತಗೊಂಡ ನೀರಿನಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಜನರಲ್ಲಿ ಮನವರಿಕೆ ಮಾಡಿಕೊಡಬೇಕು. ಕೆರೆಕಟ್ಟೆಗಳ ಸಮೀಪ ತ್ಯಾಜ್ಯ ವಸ್ತುಗಳು ಜಲ ಮೂಲಗಳಲ್ಲಿ ಕಲುಷಿತವಾಗದಂತೆ ನೋಡಿಕೊಳ್ಳಬೇಕು. ಪಂಪ್‌ಹೌಸ್ ಸುಸ್ಥಿತಿಯಲ್ಲಿಡುವುದು ಹಾಗೂ ಎಲ್ಲ ಜಲಮೂಲಗಳ ನೀರಿನ ಮಾಹಿತಿ ಹೊಂದಿರಬೇಕು ಎಂದರು.
ಜಿಲ್ಲಾ ಯೋಜನಾ ವ್ಯವಸ್ಥಾಪಕ ಎಂ.ಎಂ.ಮೋಹನ್, ಸಹಾಯಕ ನಿರ್ದೇಶಕ ಮೋಹಿದ್ದಿನ್, ಇಂಜಿನಿಯರ್‌ಗಳಾದ ಹರಿರಾಮ್, ಪ್ರಭು, ವಿಜೇತ್, ಮಂಜುನಾಥ್, ಬಿ.ರವಿಕುಮಾರ್, ಐಎಸ್‌ಆರ್‌ಎ ತಂಡದ ಜಲಧರ್, ಮಮತಾ, ರವಿಕಿರಣ್, ಚಿರಂಜೀವಿ, ಯೋಗೀಶ್, ಪ್ರದೀಪ್, ಮನೋಹರ್, ಮೇಘರಾಜ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net