ಕೆರೆಗಳ ಸಂರಕ್ಷಣೆಗೆ ಆದ್ಯತೆ ನೀಡಿ, ಜಿಲ್ಲಾಧಿಕಾರಿ ರವೀಂದ್ರ ಸೂಚನೆ, ಕರ್ನಾಟಕ ಕೆರೆ ಸಂರಕ್ಷಣೆ, ಅಭಿವೃದ್ಧಿ ಸಭೆ

DC Meeting 08.01 (7)
Published on

ಬೆಂಗಳೂರು ಗ್ರಾಮಾಂತರ: ಗ್ರಾಮಾಂತರ ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳ ನೀರಿನ ಸಂರಕ್ಷಣೆಗೆ ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಧಿಕಾರಿಗಳಿಗೆ ತಿಳಿಸಿದರು.

ದೇವನಹಳ್ಳಿ ತಾಲೂಕಿನ ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಸಭೆಯಲ್ಲಿ ಮಾತನಾಡಿದರು.

ಹೈಕೋರ್ಟ್ ಕೆರೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಈಗಾಗಲೇ ನಿರ್ದೇಶನ ನೀಡಿದ್ದು, ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಣ್ಣ ನೀರಾವರಿ ಇಲಾಖೆಯಡಿ 98 ಕೆರೆಗಳು ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 611 ಕೆರೆಗಳಿದ್ದು, ಎಲ್ಲ ಕೆರೆಗಳ ಸಂರಕ್ಷಣೆಗೆ ಆದ್ಯತೆ ಮೇರೆಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿ ಅಪೆಕ್ಸ್ ಸಮಿತಿ ರಚಿಸಿದ್ದು, ಸದಸ್ಯರು ಅಕ್ರಮ ಹಾಗೂ ಅತಿಕ್ರಮಣವನ್ನು ತಡೆಯುವ ಕಾರ್ಯ ಮಾಡಬೇಕು. ನಗರ ಪ್ರದೇಶಗಳಲ್ಲಿ ಕೊಳಚೆ ನೀರು ನೇರವಾಗಿ ಕೆರೆಗಳ ಒಡಲು ಸೇರಿ, ನೀರು ಮಲಿನವಾಗುತ್ತಿರುವುದನ್ನು ತಡೆಗಟ್ಟಲು ನಗರ ಪ್ರದೇಶದ ಬಡಾವಣೆಗಳಲ್ಲೇ ನೀರು ಇಂಗುವಂತೆ ಮಾಡಬೇಕು ಎಂದು ಪೌರಾಯುಕ್ತರಿಗೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್ ಮಾತನಾಡಿ, ಕೆರೆಗಳ ಸುತ್ತ 30 ಮೀಟರ್ ವ್ಯಾಪ್ತಿಯನ್ನು ಬಫರ್ ಪ್ರದೇಶವೆಂದು ಘೋಷಿಸಲಾಗಿದ್ದು, ಅತಿಕ್ರಮಣ ತೆರವುಗೊಳಿಸಬೇಕು ಹಾಗೂ ಯೋಜನಾ ಪ್ರಾಧಿಕಾರದ ಸಹಾಯ ಪಡೆದು ತಹಸೀಲ್ದಾರರು ಕೆರೆಗಳ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದರು.

ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೆರೆಗಳ ಗಡಿ ಗುರುತಿಸಿ, ಕೆರೆಯಲ್ಲಿ ಬೆಳೆದಿರುವ ಗಿಡ ತೆರವುಗೊಳಿಸಿ, ಹೂಳೆತ್ತುವ ಕಾರ್ಯ ಮಾಡಬೇಕು. ತೆಗೆ, ಕೆ ಅಭಿವೃದ್ಧಿ ಪಡಿಸಬೇಕು ಎಂದು ಸಲಹೆ ನೀಡಿದರು.

ಅಧಿಕಾರಿಗಳಿಂದ ಮಾಹಿತಿ: ಹೊಸಕೋಟೆಯ ಅಮಾನಿಕೆರೆ, ಚಿಕ್ಕಕೆರೆ, ದೇವನಹಳ್ಳಿ ಹಾಗೂ ವಿಜಯಪುರದ ಅಮಾನಿಕೆರೆ, ದೊಡ್ಡಬಳ್ಳಾಪುರದ ನಾಗರಕೆರೆ ಹಾಗೂ ನೆಲಮಂಗಲ ಕೆರೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net