ಪ್ರವಾಸಿ ತಾಣಗಳಲ್ಲಿ ಸ್ವಚ್ಛತಗೆ ಹೆಚ್ಚು ಆದ್ಯತೆ ನೀಡಿ

27 ckm 6
ಕಲ್ಲುಗುಡ್ಡೆ, ರಂಗನಬೆಟ್ಟ ಪ್ರವಾಸಿ ತಾಣಕ್ಕೆ ಚಾರಣ ಹಾಗೂ ಸ್ವಚ್ಛತಾ ಕಾರ್ಯಕ್ರಮಕ್ಕೆ ಜಿಪಂ ಸಿಇಒ ಡಾ.ಗೋಪಾಲಕೃಷ್ಣ ಚಾಲನೆ ನೀಡಿದರು. ನಾರಾಯಣ ರೆಡ್ಡಿ, ಮಂಜುಳಾ ಇದ್ದರು.
Published on

ಚಿಕ್ಕಮಗಳೂರು: ಪ್ರವಾಸೋದ್ಯಮ ಮನರಂಜನೆಯಲ್ಲ. ಬದಲಿಗೆ ಅದೊಂದು ಉದ್ಯಮ. ಪ್ರವಾಸೋದ್ಯಮದಿಂದ ಒಂದು ಪ್ರದೇಶದ ಆರ್ಥಿಕತೆ ನಿರ್ಧಾರವಾಗುತ್ತದೆ ಎಂದು ಜಿಪಂ ಸಿಇಒ ಡಾ.ಗೋಪಾಲಕೃಷ್ಣ ಹೇಳಿದರು.
ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಕಲ್ಲುಗುಡ್ಡೆ, ರಂಗನಬೆಟ್ಟ ಪ್ರವಾಸಿ ತಾಣಕ್ಕೆ ಚಾರಣ ಹಾಗೂ ಸ್ವಚ್ಛತಾ ಕಾರ್ಯಕ್ರಮಕ್ಕೆ ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಪ್ರವಾಸೋದ್ಯಮದಿಂದ ಆ ಪ್ರದೇಶದ ಸುತ್ತಮುತ್ತಲಿನ ಎಲ್ಲ ಉದ್ಯಮಗಳಿಗೂ ಮತ್ತಷ್ಟು ಪುಷ್ಟಿ ಸಿಗುತ್ತದೆ. ಪ್ರವಾಸೋದ್ಯಮದಿಂದಲೇ ಸಾಕಷ್ಟು ಮಂದಿ ಜೀವನ ಕಟ್ಟಿಕೊಂಡಿದ್ದಾರೆ. ಯಾವುದೇ ಒಂದು ಸ್ಥಳ ಪ್ರಖ್ಯಾತಿ ಪಡೆಯುತ್ತಿದ್ದಂತೆ ಅಲ್ಲಿನ ಆರ್ಥಿಕ ವ್ಯವಸ್ಥೆಯೂ ಹಂತ ಹಂತವಾಗಿ ಬದಲಾಗುತ್ತದೆ ಎಂದು ಹೇಳಿದರು.
ಚಿಕ್ಕಮಗಳೂರು ದೇಶದಲ್ಲಿಯೇ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಜಿಲ್ಲೆಗಳ ಪಟ್ಟಿಯಲ್ಲಿದೆ. ಕಾಫಿ ಹೊರತುಪಡಿಸಿದರೆ ಚಿಕ್ಕಮಗಳೂರು ಜಿಲ್ಲೆಗೆ ಹೆಚ್ಚು ಆದಾಯ ಬರುತ್ತಿರುವುದು ಪ್ರವಾಸಿಗರಿಂದ. ಹೀಗಾಗಿ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಸ್ವಚ್ಛತೆ ಬಗ್ಗೆ ನಾವು ಗಮನಹರಿಸುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಲೋಹಿತ್ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಇನ್ನಷ್ಟು ಉತ್ತೇಜಿಸುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರವಾಸಿ ತಾಣಗಳಿಗೆ ಚಾರಣ ಮಾಡುವ ಜತೆಗೆ ಅಲ್ಲಿನ ಸ್ವಚ್ಛತೆಗೆ ಸಂಘ, ಸಂಸ್ಥೆಗಳ ಜತೆ ಸೇರಿ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಎಡಿಸಿ ನಾರಾಯಣ ರೆಡ್ಡಿ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧಿಕಾರಿ ಮಂಜುಳಾ, ಅಶ್ವತ್ ಬಾಬು, ತೇಜಸ್ವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net