ವಿದ್ಯಾರ್ಥಿ ನಿಲಯಗಳಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಿ: ಅನಿಲ್ ಧಾವನ್

anil dhavan
Published on

ಮಡಿಕೇರಿ: ವಿದ್ಯಾರ್ಥಿ ನಿಲಯಗಳಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಅಂಕಿತ ಅಧಿಕಾರಿ ಅನಿಲ್ ಧಾವನ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಕಾರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ನಿಲಯ ಪಾಲಕರು, ನಿಲಯ ಮೇಲ್ವಿಚಾರಕರು ಹಾಗೂ ಸಿಬ್ಬಂದಿಗಳಿಗೆ ನಗರದ ಗಾಂಧಿ ಭವನದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಪಾಡುವ ಕುರಿತು ಮಂಗಳವಾರ ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿ ನಿಲಯಗಳ ಅಡುಗೆ ಕೋಣೆಯಲ್ಲಿ ಸ್ವಚ್ಛತೆ, ಆಹಾರ ದಾಸ್ತಾನು ಉಗ್ರಾಣದಲ್ಲಿ ಇಲಿ, ಹೆಗ್ಗಣ ಸೇರದಂತೆ ಗಮನಹರಿಸಬೇಕು. ವೈಯಕ್ತಿಕ ಪರಿಸರ ಶುಚಿತ್ವ ಕಾಪಾಡುವುದು ಹಾಗೂ ಶುದ್ಧ ಕುಡಿಯುವ ನೀರು ಪೂರೈಸಬೇಕು. ಆಹಾರ ತಯಾರಿಕೆ ವಿಧಾನ, ನೈರ್ಮಲ್ಯಕ್ಕೆ ಆದ್ಯತೆ ನೀಡುವುದು ಹೀಗೆ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಅಂಕಿತ ಅಧಿಕಾರಿ ಅನಿಲ್ ಧಾವನ್ ಅವರು ಹೇಳಿದರು.

ವಿದ್ಯಾರ್ಥಿ ನಿಲಯಗಳಲ್ಲಿ ಕರ್ತವ್ಯ ನಿರ್ವಹಿಸುವವರು ದೈಹಿಕ ಶುಚಿತ್ವ ಮತ್ತು ಆರೋಗ್ಯದ ಕಡೆ ಗಮನಹರಿಸಬೇಕು. ತಯಾರಿಸಿದ ಆಹಾರವನ್ನು ಮುಚ್ಚಿಡುವುದು, ಕ್ರಿಮಿಕೀಟಗಳಿಂದ ಆಹಾರ ಕಲುಷಿತವಾಗದಂತೆ ಗಮನಹರಿಸಬೇಕು. ತಯಾರಿಸಿದ ಆಹಾರವನ್ನು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಬಳಸಬೇಕು. ಪ್ಯಾಕ್ ಮಾಡಿದ ಆಹಾರ ವಸ್ತುಗಳ ಲೇಬಲ್‌ಗಳಲ್ಲಿ ಗ್ರಾಹಕರಿಗೆ ಅಗತ್ಯವಾಗಿ ನೀಡಲೇಬೇಕಾದ ಮಾಹಿತಿ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದು ಅನಿಲ್ ಧಾವನ್ ಹೇಳಿದರು.

ಕಚ್ಚಾ ವಸ್ತುಗಳು ಹಾಗೂ ಸಿದ್ಧಪಡಿಸಿದ ಆಹಾರವನ್ನು ಪ್ರತ್ಯೇಕವಾಗಿ ಶೇಖರಿಸಬೇಕು. ತ್ಯಾಜ್ಯ ವಸ್ತುಗಳನ್ನು ಸೂಕ್ತವಾಗಿ ಸಂಗ್ರಹಿಸಿ ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಶುದ್ಧ ಮತ್ತು ಸುರಕ್ಷಿತ ಗುಣಮಟ್ಟದ ಆಹಾರ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಿವರಿಸಿದರು.

ಆಹಾರ ವಸ್ತು ತಯಾರಿಸುವವರು ಮತ್ತು ವಿತರಣೆ ಮಾಡುವವರು ಕೈಗಳನ್ನು ಸೋಪು, ಸೋಂಕು ನಿವಾರಣೆ ದ್ರಾವಣದಿಂದ ತೊಳೆಯಬೇಕು. ಕೈಗಳಿಗೆ ಗ್ಲೌಸ್, ಮುಖಕ್ಕೆ ಮಾಸ್ಕ್ ಮತ್ತು ತಲೆಗೆ ಕೂದಲುಗಳನ್ನು ಮುಚ್ಚುವಂತಿರುವ ಟೋಪಿ ಮತ್ತು ಕಾಲುಗಳಿಗೆ ಪಾದರಕ್ಷೆ ಧರಿಸಬೇಕು. ಕೈಗಳ ಉಗುರುಗಳನ್ನು ಮತ್ತು ತಲೆ ಕೂದಲನ್ನು ಕತ್ತರಿಸಬೇಕು ಎಂದು ಸಲಹೆ ಮಾಡಿದರು.

ಬಿಸಿಎಂ ಇಲಾಖೆಯ ಅಧಿಕಾರಿ ಪಿ.ಪಿ.ಕವಿತಾ ಮಾತನಾಡಿ, ವಿದ್ಯಾರ್ಥಿ ನಿಲಯಗಳಲ್ಲಿ ಸ್ವಚ್ಚತೆಗೆ ಪ್ರಥಮ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶುಚಿತ್ವದ ಆಹಾರ ನೀಡಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ಮಾಡಿದರು.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ವಿಭಾಗದ ಮಂಜುನಾಥ್, ಹಿಂದುಳಿದ ವರ್ಗಗಳ ಇಲಾಖೆಯ ತಾಲೂಕು ಅಧಿಕಾರಿ ಮೋಹನ್ ಕುಮಾರ್, ವ್ಯವಸ್ಥಾಪಕ ಶಿವಶಂಕರ, ಆರೋಗ್ಯ ಶಿಕ್ಷಣಾಧಿಕಾರಿ ಶ್ರೀನಾಥ್, ನಿಲಯ ಮೇಲ್ವಿಚಾರಕರಾದ ಶ್ರೀಕಾಂತ್, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net