

ಕಲಘಟಗಿ: ಡೆಂಗೆ ಜ್ವರ ನಿಯಂತ್ರಣ ಎಲ್ಲರ ಜವಾಬ್ದಾರಿಯಾಗಿದ್ದು, ಲಾರ್ವಾನಾಶ ಮಾಡುವುದು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿ ರೋಗ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಿ.ಜಿ. ಅಂಗಡಿ ಹೇಳಿದರು.
ಪಟ್ಟಣದಲ್ಲಿ ತಾಲೂಕು ಆರೋಗ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಲಾರ್ವಾ ಸಮೀಕ್ಷೆ ಹಾಗೂ ಡೆಂಗೆ ಕುರಿತ ಜನ ಜಾಗೃತಿ ಮೂಡಿಸುವ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಗಲಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರ ವಹಿಸಬೇಕು. ಸೊಳ್ಳೆಗಳ ಉತ್ಪತ್ತಿಗೆ ಅವಕಾಶವಿಲ್ಲದಂತೆ ನೋಡಿಕೊಳ್ಳಬೇಕು. ನೀರು ನಿಲ್ಲದಂತೆ ನಿಗಾ ವಹಿಸುವುದರ ಜತೆಗೆ ನೀರಿನ ತೊಟ್ಟಿ, ಬ್ಯಾರಲ್ ಮುಂತಾದವುಗಳನ್ನು ವಾರಕ್ಕೊಮ್ಮೆ ಶುಚಿಗೊಳಿಸಿ ಒಣಗಿಸಿ ನೀರು ತುಂಬಿಸಬೇಕು ಎಂದದರು.
ಸಿಡಿಪಿಒ ವಿದ್ಯಾ ಬಡಿಗೇರ, ಆರೋಗ್ಯ ಇಲಾಖೆಯ ಮೇಲ್ವಿಚಾರಕ ಮಾಲತೇಶ ಕುಲಕರ್ಣಿ, ರತ್ನಂ ಶೀಲಿ, ಕವಿತಾ ಅಷ್ಟೇಕರ, ಗೀತಾ ಬಡಿಗೇರ, ಮಂಜುಳಾ ಕಟ್ಟಿಮನಿ ಇತರರಿದ್ದರು.