

ಮುಳಬಾಗಿಲು: ತಾಲೂಕಿನ ನಂಗಲಿ, ಮುದಿಗೆರೆ ಮಜರಾ ಗಡ್ಡೂರು ಗ್ರಾಮ ಪಂಚಾಯಿತಿಗಳಿಗೆ ಮತ್ತು ಗ್ರಂಥಾಲಯಕ್ಕೆ, ಅಂಗನವಾಡಿ ಕೇಂದ್ರಗಳಿಗೆ ಹಾಗೂ ಟಿ.ಕುರುಬರಹಳ್ಳಿ ಗ್ರಾಮಕ್ಕೆ ಮಂಗಳವಾರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವಿಣ್ ಪಿ.ಬಾಗೇವಾಡಿ ಭೇಟಿ ನೀಡಿ ಸ್ವಚ್ಛತೆ, ಸೌಕರ್ಯ ಹಾಗೂ ಸೇವೆಗಳನ್ನು ಪರಿಶೀಲಿಸಿದರು.
ಮೊದಲಿಗೆ ನಂಗಲಿ ಗ್ರಾಪಂ ಕಚೇರಿಗೆ ಭೇಟಿ ನೀಡಿ ಕಚೇರಿಯಲ್ಲಿಯ ಕಡತಗಳ ನಿರ್ವಹಣೆ ಹಾಗೂ ಕಚೇರಿಯ ಸ್ವಚ್ಛತೆ ಮತ್ತು ಸೌಲಭ್ಯಗಳನ್ನು ಪರಿಶೀಲಿಸಿ, ಕಡತಗಳನ್ನು ಕ್ರಮಬದ್ಧವಾಗಿ ಹಾಗೂ ಕಚೇರಿಯನ್ನು ಸೂಕ್ತವಾದ ರೀತಿಯಲ್ಲಿ ಇಟ್ಟುಕೊಳ್ಳುವಂತೆ ಸೂಚಿಸಿದರು. ಬಳಿಕ ಮುದಿಗೆರೆ ಮಜರಾ ಗಡ್ಡೂರು ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ, ಬೀಳುವ ಸ್ಥಿತಿಯಲ್ಲಿದ್ದ ತೀರಾ ಹಳೇದಾದ ಚಪ್ಪಡಿ ಕಲ್ಲುಗಳ ಕಟ್ಟಡವನ್ನು ನೋಡಿ ಕೂಡಲೇ, ನೂತನ ಕಟ್ಟಡದ ನಿಮಾರ್ಣಕ್ಕೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಬಿಲ್ ಮಂಜೂರಿಗೆ ಕ್ರಮ: ಗ್ರಾಮಸ್ಥರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಮುದಿಗೆರೆ ಮಜರಾ ಗಡ್ಡೂರು ಗ್ರಾಪಂ ವ್ಯಾಪ್ತಿಯ ಟಿ.ಕುರುಬರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಜಿಪಂ ಸಿಇಒ ಚರಂಡಿಗಳ ನಿರ್ವಹಣೆ, ಗಿಡ&ಗಂಟಿಗಳನ್ನು ನೋಡಿ ಸ್ವಚ್ಛವಾಗಿಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೂಸಿನ ಮನೆಗೆ ಭೇಟಿ ನೀಡಿ, ನಾಮಫಲಕ ಇಲ್ಲದಿರುವುದನ್ನು ಗಮನಿಸಿ ಕೂಡಲೇ ನಾಮಫಲಕ ಅಳವಡಿಸುವಂತೆ ತಿಳಿಸಿದರು. ಗ್ರಾಮಸ್ಥರು ದನ ಹಾಗೂ ಕುರಿಗಳ ಶೆಡ್ಗಳಿಗೆ ಬಿಲ್ ಆಗದಿರುವ ಕುರಿತು ದೂರು ನೀಡಿದರು. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಪಂ ಸಿಇಒ, ಕೂಡಲೇ ಫಲಾನುಭವಿಗಳಿಗೆ ಬಿಲ್ ಮಾಡಿಕೊಡುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು. ತಾಪಂ ಇಒ ಅಧಿಕಾರಿ ಡಾ.ಕೆ.ಸರ್ವೇಶ್, ನರೇಗಾ ಸಹಾಯಕ ನಿರ್ದೇಶಕ ರವಿಚಂದ್ರ, ಪಿಡಿಒ ಕೆ.ಸರಿತಾ ಮತ್ತಿತರರು ಇದ್ದರು.
ಮಕ್ಕಳ ಮೇಲೆ ನಿಗಾ ಇರಲಿ
ಗಡ್ಡೂರು ಗ್ರಾಮದ ಅಂಗನವಾಡಿಗೆ ಭೇಟಿ ನೀಡಿದ ಜಿಪಂ ಸಿಇಒ ಮಕ್ಕಳ ಹಾಜರಾತಿ, ಆಹಾರ, ದಾಖಲಾತಿಗಳನ್ನು ಪರಿಶೀಲಿಸಿ, ಮಕ್ಕಳಿಗೆ ನೀಡುವ ಹಾಲು ಹಾಗೂ ಇತರ ಆಹಾರ ಸಾಮಗ್ರಿ ಬಗ್ಗೆ ಅಂಗನವಾಡಿ ಸಹಾಯಕಿಯರ ಬಳಿ ಮಾಹಿತಿ ಪಡೆದರು. ಅಂಗನವಾಡಿಯಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. ಆಹಾರ ಪದಾರ್ಥಗಳನ್ನು ಪರಿಶೀಲಿಸಿ, ಮಕ್ಕಳಿಗೆ ನೀಡಬೇಕು. ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ನಿಗಾ ಇಟ್ಟು ಮಕ್ಕಳನ್ನು ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಅಂಗನವಾಡಿ ಪಕ್ಕದಲ್ಲಿ ಕೆಳಗೆ ಬಿಸಾಡಲಾಗಿದ್ದ ಜಲ ಜೀವನ್ ಮಿಷನ್ ನಾಮಫಲಕ ನೋಡಿ ಕೆಂಡಾಮಂಲರಾದ ಜಿಇಒ, ಜೆಜೆಎಂ ನಾಮಫಲಕವನ್ನು ಹಾಕುವ ಉದ್ದೇಶವೇ ಸಾರ್ವಜನಿಕರಿಗೆ ಮಾಹಿತಿ ನೀಡುವುದು, ಅಂತಹ ನಾಮ ಫಲಕವನ್ನು ಬಿಸಾಡಿರುವುದು ಎಷ್ಟರಮಟ್ಟಿಗೆ ಸರಿ? ಕೂಡಲೇ ನಾಮಫಲಕವನ್ನು ಅಳವಡಿಸಬೇಕು ಎಂದು ಸೂಚಿಸಿದರು. ಬಳಿಕ ಗ್ರಾಮದ ಗ್ರಂಥಾಲಯಕ್ಕೆ ಭೇಟಿ ನೀಡಿ, ಪುಸ್ತಕಗಳ ಜೋಡಣೆ, ಗಣಕ ಯಂತ್ರಗಳ ನಿರ್ವಹಣೆ, ಹಾಜರಾತಿ, ಬೇಸಿಗೆ ಶಿಬಿರದ ಮಾಹಿತಿ ಹಾಗೂ ಚಟುವಟಿಕೆ ಹಾಗೂ ಗ್ರಂಥಾಲಯದ ನಿರ್ವಹಣಾ ಕ್ರಮ ನೋಡಿ ಗ್ರಂಥಾಲಯದ ಮೇಲ್ವಿಚಾರಕ ನರಸಿಂಹ ಶೆಟ್ಟಿಗೆ ಪ್ರಶಂಸೆ ವ್ಯಕ್ತಪಡಿಸಿದರು.