

ಇಳಕಲ್ಲ: ನಗರ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕೆಂದು ಅಧಿಕಾರಿಗಳಿಗೆ ಕರ್ನಾಟಕ ಲೋಕಾಯುಕ್ತ ಬಿ.ಎಸ್. ಪಾಟೀಲ ಖಡಕ್ ಸೂಚನೆ ನೀಡಿದರು.
ಬೆಂಗಳೂರಿನಿಂದ ವಿಜಯಪುರದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಶುಕ್ರವಾರ ಹೊರಟ್ಟಿದ್ದ ವೇಳೆ ಮಾರ್ಗ ಮಧ್ಯೆ ಇಳಕಲ್ಲದ ನಿರೀಕ್ಷಣಾ ಮಂದಿರಕ್ಕೆ ಭೇಟಿ ನೀಡಿ ತಾಲೂಕು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ರಾಜ್ಯದಲ್ಲಿ ಸದ್ಯ ಡೆಂೆ ಹಾವಳಿ ಹೆಚ್ಚಿದ್ದು, ಸಾರ್ವಜನಿಕರಲ್ಲಿ ಈ ಕುರಿತು ಜನಜಾಗೃತಿ ಮೂಡಿಸಬೇಕಲ್ಲದೆ, ನಗರದ ಎಲ್ಲ ಸರ್ಕಾರಿ ಶಾಲೆಗಳ ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಆರೋಗ್ಯ ಇಲಾಖೆ ಹಾಗೂ ಪೌರಾಯುಕ್ತ ಶ್ರೀನಿವಾಸ ಜಾಧವ ಅವರಿಗೆ ತಿಳಿಸಿದರು.
ಎರಡ್ಮೂರು ದಿನಗಳಲ್ಲಿ ನಗರಕ್ಕೆ ನಮ್ಮ ಲೋಕಾಯುಕ್ತ ಅಧಿಕಾರಿಗಳು ಆಗಮಿಸಲಿದ್ದು, ಅವರ ನಿರ್ದೇಶನದಂತೆ ಕಾರ್ಯ ನಿರ್ವಹಿಸಬೇಕು. ಅಧಿಕಾರಿಗಳು ಕ್ಷಮತೆಯಿಂದ ಕೆಲಸ ಮಾಡದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ವಿಜಯಪುರ- ಬಾಗಲಕೋಟೆ ಲೋಕಾಯುಕ್ತ ಎಸ್‌ಪಿ ಸತೀಶ ಮೆಟಗುಡ್ಡ, ಹುನುಗುಂದ-ಇಲಕಲ್ಲ ಲೋಕಾಯುಕ್ತ ಬಸವರಾಜ, ತಾಲೂಕು ತಹಸೀಲ್ದಾರ್‌ರಾದ ನಿಂಗಪ್ಪ ಬಿರಾದಾರ್, ಎಸ್.ಬಿ. ಕೂಡಲಗಿ, ಇಒ ಮುರಳೀಧರ ದೇಶಪಾಂಡೆ, ಸಿಪಿಐ ಸುನೀಲ್ ಸವದಿ, ಪೌರಾಯುಕ್ತ ಶ್ರೀನಿವಾಸ ಜಾಧವ, ಪಿಎಸ್‌ಐ ಎಸ್.ಆರ್. ನಾಯಕ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.