

ಬೆಂಗಳೂರು: ರೈತರು ತಾವು ಬೆಳೆದ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಪಡೆಯಲು ಬ್ರ್ಯಾಂಡಿಂಗ್ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಈ ವಿಧಾನದಿಂದ ಅಧಿಕ ಲಾಭ ಪಡೆಯುವ ಜತೆಗೆ ರ್ತು ಮಾಡುವ ಅವಕಾಶವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ (ಎಎಸ್‌ಆರ್‌ಬಿ) ಅಧ್ಯಕ್ಷ ಡಾ. ಸಂಜಯ್ ಕುಮಾರ್ ತಿಳಿಸಿದ್ದಾರೆ.
ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರದ (ಐಐಎಚ್‌ಆರ್) 59ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಕೃಷಿ ಜಿಡಿಪಿಯ ಶೇ.33 ತೊಟಗಾರಿಕೆ ಕ್ಷೇತ್ರದ ಕೊಡುಗೆಯಾಗಿದೆ. ಈ ಸಾಧನೆ ಹಿಂದೆ ಐಐಎಚ್‌ಆರ್ ಪಾತ್ರವೂ ಇದೆ. ಕೃಷಿ ಉತ್ಪನ್ನಗಳ ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಮೂಲಸೌಕರ್ಯವನ್ನು ಹೆಚ್ಚಿಸಬೇಕಿದೆ. ಗಂಭೀರ ಸಮಸ್ಯೆಗಳಿಗೆ ಸಂಶೋಧನೆಯಿಂದ ಪರಿಹಾರ ಕಂಡುಕೊಳ್ಳಲು ಗಮನ ಹರಿಸಬೇಕು. ಭವಿಷ್ಯದಲ್ಲಿ ತೋಟಗಾರಿಕೆ, ಔಷಧೀಯ, ಪೌಷ್ಟಿಕ ಉತ್ಪನ್ನಗಳ ಅಭಿವೃದ್ಧಿ, ಕೃಷಿ ಪ್ರವಾಸೋದ್ಯಮ ಮುಂಚೂಣಿಗೆ ಬರಲಿದೆ ಎಂದರು.
ಐಐಎಚ್‌ಆರ್‌ನ ನಿರ್ದೇಶಕ ಡಾ. ತುಷಾರ್ ಕಾಂತಿ ಬೆಹರಾ ಮಾತನಾಡಿ, ಸಂಸ್ಥೆಯು ಹೂ-ಹಣ್ಣು, ಔಷಧೀಯ ಸಸ್ಯ ಇತ್ಯಾದಿ ಸೇರಿ 54 ಬಗೆಯ ತೋಟಗಾರಿಕೆ ಬೆಳೆಗಳ ಮೇಲೆ ಸಂಶೋಧನೆ ನಡೆಸುತ್ತಿದೆ. ಕಳೆದ ವರ್ಷ ಸಂಸ್ಥೆಯ ವಿಜ್ಞಾನಿಗಳಿಂದ ಅಭಿವೃದ್ಧಿಪಡಿಸಿದ 30 ತಳಿಗಳನ್ನು ರಾಷ್ಟ್ರ ಮಟ್ಟದ ಸಮಿತಿಯಿಂದ ಅನುಮೋದನೆ ಪಡೆದು 6 ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ತೊಟಗಾರಿಕೆ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಹಾಗೂ ಸ್ನಾತಕೋತ್ತರ ಶಿಕ್ಷಣದಲ್ಲಿ ಐಐಎಚ್‌ಆರ್ ಹೆಚ್ಚಿನ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಪ್ರಗತಿಪರ ರೈತರಿಗೆ ಸನ್ಮಾನ:
ಇದೇ ವೇಳೆ ಸಂಸ್ಥೆಯ ವತಿಯಿಂದ ಪ್ರಗತಿಪರ ರೈತನ್ನು ಸನ್ಮಾನಿಸಲಾಯಿತು. ಜತೆಗೆ ಐಐಎಚ್‌ಆರ್‌ನ ವಿವಿಧ ವಿಭಾಗಗಳ ಸಾಧಕ ಸಿಬ್ಬಂದಿಗಳನ್ನು ಗೌರವಿಸಲಾಯಿತು. ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಶಾಲಾ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಶಸ್ತಿ ವಿತರಿಸಿದರು.