ಮುದ್ರಣ ಮಾಧ್ಯಮದಲ್ಲಿ ವಿಶ್ವಾಸಾರ್ಹತೆ ಹೆಚ್ಚು

Print media has high credibility
ಬೀಳಗಿ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚಾರಣೆ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಾಸಕ ಜೆ.ಟಿ. ಪಾಟೀಲ, ತಹಸೀಲ್ದಾರ್ ವಿನೋದ ಹತ್ತಳ್ಳಿ, ಶೇಷಪ್ಪಯ್ಯ ಶ್ರೀಗಳು ಇದ್ದರು.
Published on

ಬೀಳಗಿ: ಮೊಬೈಲ್‌ನಲ್ಲಿ ಎಲ್ಲ ಸುದ್ದಿಗಳೂ ಸಿಗುವ ಸ್ಪರ್ಧೆಯ ದಿನಗಳಲ್ಲಿ ಮುದ್ರಣ ಮಾಧ್ಯಮದಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ವಿಶ್ವಾಸಾರ್ಹವಾಗಿವೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಸ್ಥಳೀಯ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸತ್ಯ ಸುದ್ದಿ ಪ್ರಕಟವಾಗುವುದು ಬಹುಪಾಲು ಮುದ್ರಣ ಮಾಧ್ಯಮದಲ್ಲಿಯೇ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಸತ್ಯಾಸತ್ಯತೆ ಪರಿಶೀಲಿಸಿ ವರದಿ ಮಾಡುವ ಪತ್ರಿಕೆಗಳ ಅಗತ್ಯ ಹೆಚ್ಚಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜತೆಗೆ ಪತ್ರಿಕಾ ರಂಗವೂ ಒಂದಾಗಿದೆ ಎಂದರು.

ರಚನಾತ್ಮಕ ಟೀಕೆ, ಟಿಪ್ಪಣಿಗಳ ಮೂಲಕ ಆಡಳಿತ ವರ್ಗವನ್ನು ಎಚ್ಚರಿಸಿ ಸರಿದಾರಿಗೆ ತರುವ ಕೆಲಸವನ್ನು ಪತ್ರಿಕಾರಂಗ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಬರುವ ದಿನಗಳಲ್ಲಿ ಪ್ರತಿಕಾ ಮಿತ್ರರ ಬೇಡಿಕೆಯಂತೆ ಬೀಳಗಿ ಪಟ್ಟಣದಲ್ಲಿ ನಿವೇಶನ ಹಾಗೂ ಅದರ ಕಟ್ಟಡ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಸಾಗರ ತೆಕ್ಕೆನ್ನವರ ಮಾತನಾಡಿ, ಮನೆ ಮನಗಳಲ್ಲಿ ನಿತ್ಯ ಪತ್ರಿಕೆ ಓದುವ ಸಂಸ್ಕೃತಿ ಬೆಳೆಯಬೇಕು. ಸತ್ಯ ವರದಿಗಾರಿಕೆ, ಸಾಮಾಜಿಕ ಸಾಮರಸ್ಯ ಮತ್ತು ಪತ್ರಕರ್ತರ ಜವಾಬ್ದಾರಿ ಇಂದು ಬಹಳಷ್ಟಿದೆ. ಪತ್ರಿಕೆ ಮತ್ತು ಪತ್ರಕರ್ತರು ಇಲ್ಲದ ಈ ಸಮಾಜವನ್ನು ಮುನ್ನಡೆಸಲು ಸಾಧ್ಯವಿಲ್ಲ. ವಸ್ತುನಿಷ್ಠ ಸುದ್ದಿಗಳ ಬಿತ್ತರಿಸುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕರ್ತವ್ಯ ಪತ್ರಕರ್ತರ ಮೇಲೆ ಇದೆ ಎಂದರು.

ಸಿಪಿಐ ಹನುಮಂತ ಸಣಮನಿ ಮಾತನಾಡಿದರು. ಸಮಾಜ ಸೇವೆಗಾಗಿ ಪತ್ರಕರ್ತ ಕಿರಣ ನಾಯಕರ ಅವರಿಗೆ ‘ಸಾಮಾಜಿಕ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಾಗರಾಳ ದಿಗಂಬರೇಶ್ವರ ಮಠದ ಶೇಷಪ್ಪಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಹಸೀಲ್ದಾರ್ ವಿನೋದ ಹತ್ತಳ್ಳಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಕಾನಿಪ ಸಂಘದ ತಾಲೂಕು ಅಧ್ಯಕ್ಷ ಸುಭಾಸ ರಾಠೋಡ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಆದಾಪುರ, ತಾಪಂ ಕಾರ್ಯಾಲಯದ ಅಧಿಕಾರಿ ಮಹೇಶ ಜಗಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತ ಕಾಖಂಡಕಿ, ಚನ್ನಬಸು ಚಲವಾದಿ ಇದ್ದರು.

ಕಿರಣ ಬಾಳಾಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಎಂ. ಸಾಹುಕಾರ ಸ್ವಾಗತಿಸಿದರು. ಶಿಕ್ಷಕ ಬಿ.ಬಿ. ನಾಯಕ ಮತ್ತು ಸೋಮಲಿಂಗ ಬೇಡರ ನಿರೂಪಿಸಿದರು. ಸರಸ್ವತಿ ದೇವರಮನಿ ಮತ್ತು ಸಿದ್ಧಾರ್ಥ ದೇವರಮನಿ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net