ಮುದ್ರಣ ಮಾಹಿತಿ ಪಡೆದ ವಿದ್ಯಾರ್ಥಿಗಳು

GVT PRESS VISIT
ಗಂಗಾವತಿ ವಿಜಯವಾಣಿ ಮುದ್ರಣಾಲಯಕ್ಕೆ ಶುಕ್ರವಾರ ಸಂಜೆ ವಿದ್ಯಾನಿಕೇತನ ಪದವಿ ಕಾಲೇಜು ವಿದ್ಯಾರ್ಥಿಗಳು ಭೇಟಿ ನೀಡಿದ್ದರು.
Published on

ಗಂಗಾವತಿ: ಪ್ರತಿನಿತ್ಯ ಬೆಳ್ಳಂಬೆಳಗ್ಗೆ ಮನೆಮನೆಗೆ ತಲುಪುವ ವಿಜಯವಾಣಿ ಪತ್ರಿಕೆ ತಯಾರಾಗುವ ರೀತಿ, ಪುಟ ವಿನ್ಯಾಸ, ಸಂಪಾದಕೀಯ ವಿಭಾಗದ ಕಾರ್ಯನಿರ್ವಹಣೆ, ಪತ್ರಿಕೆಗಳಿಗೆ ಸುದ್ದಿಯಂತೆಯೇ ಜಾಹೀರಾತುಗಳ ಪಾತ್ರ, ಪತ್ರಿಕೆ ಮುದ್ರಣದಿಂದ ಮನೆಯವರೆಗೆ ಸಾಗುವ ಒಟ್ಟು ದಾರಿಯ ಬಗ್ಗೆ ವಿದ್ಯಾರ್ಥಿಗಳಲ್ಲಿದ್ದ ಕುತೂಹಲ ತಣಿಸಿಕೊಳ್ಳಲು ಶುಕ್ರವಾರ ಸಂಜೆ ವಿಜಯವಾಣಿ ಗಂಗಾವತಿ ಆವೃತ್ತಿ ಕಚೇರಿಗೆ ಗಂಗಾವತಿ ತಾಲೂಕಿನ ವಡ್ಡರಹಟ್ಟಿಯ ಶ್ರೀ ವಿದ್ಯಾನಿಕೇತನ ಪದವಿ ಕಾಲೇಜಿನ ಬಿಕಾಂ-ಬಿಬಿಎ ವಿದ್ಯಾರ್ಥಿಗಳು ಭೇಟಿ ನೀಡಿ, ಪತ್ರಿಕೆ ವಿವಿಧ ವಿಭಾಗಗಳ ಮಾಹಿತಿ ಪಡೆದರು.

ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಗಂಗಾವತಿ ಆವೃತ್ತಿ ಕಚೇರಿಗೆ ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಲ್ಲಿ ಪತ್ರಿಕಾ ಕಚೇರಿಗೆ ಭೇಟಿ ನೀಡಿರುವ ಖುಷಿ ಕಾಣುತ್ತಿತ್ತು. ಕಚೇರಿಗೆ ಆಗಮಿಸಿದ ವಿದ್ಯಾರ್ಥಿಗಳು ಮೊದಲು ಸಂಪಾದಕೀಯ ವಿಭಾಗಕ್ಕೆ ಭೇಟಿ ನೀಡಿದರು. ಪತ್ರಿಕಾ ಕಚೇರಿಯಲ್ಲಿನ ವಿವಿಧ ವಿಭಾಗಗಳು, ಅಲ್ಲಿನ ಸಿಬ್ಬಂದಿ ಕಾರ್ಯನಿರ್ವಹಣೆ ಅರಿತರು.

ಪತ್ರಿಕೆ ಓದು ಯಾವ ಕಾರಣಕ್ಕೆ ಮುಖ್ಯ ಮತ್ತು ಅದರಿಂದಾಗುವ ಪ್ರಯೋಜನಗಳು, ಪತ್ರಿಕೆಯ ವಿಶ್ವಾಸರ್ಹತೆ ಬಗ್ಗೆ ಸಿಬ್ಬಂದಿ ತಿಳಿಸಿಕೊಟ್ಟರು. ಸುದ್ದಿಯನ್ನು ಸಂಗ್ರಹಿಸುವ ಬಗೆ, ೆಟೋಗಳ ಕ್ಲಾರಿಟಿ, ಅದನ್ನು ಎಡಿಟ್ ಮಾಡುವ ಪರಿ, ಪುಟ ವಿನ್ಯಾಸ, ಎಲ್ಲ ಕ್ಷೇತ್ರಗಳ ಸುದ್ದಿಗೆ ನೀಡುವ ಪ್ರಾಮುಖ್ಯದ ಮಾಹಿತಿ ಹಂಚಿಕೊಳ್ಳ ಲಾಯಿತು.

ನಂತರ ಪತ್ರಿಕೆಯ ಮುದ್ರಣ ವಿಭಾಗಕ್ಕೆ ತೆರಳಿದರು. ಪುಟವು ಪಿಡಿಎಫ್ ರೂಪದಿಂದ ಸಿಟಿಪಿ ಮಷಿನ್‌ನಲ್ಲಿ ಪ್ಲೇಟ್ ಮೂಲಕ ಮುದ್ರಣಕ್ಕೆ ಸಜ್ಜುಗೊಳಿಸುವುದು, ಆನಂತರ ಪತ್ರಿಕೆ ಮುದ್ರಣಗೊಳ್ಳುವ ಒಟ್ಟು ಪ್ರಕ್ರಿಯೆಯನ್ನು ಕಣ್ತುಂಬಿಕೊಂಡು ಹರ್ಷ ವ್ಯಕ್ತಪಡಿಸಿದರು. ತಮ್ಮ ಮನೆಗೆ ನಿತ್ಯ ತಲುಪುವ ಪತ್ರಿಕೆ ತಯಾರಾಗುವ ರೀತಿ ಕಂಡು ನಿಬ್ಬೆರಗಾದರು.

ಇದೇ ವೇಳೆ ವಿಆರ್‌ಎಲ್ ಸಮೂಹ ಸಂಸ್ಥೆ ಬಗ್ಗೆಯೂ ಕೇಳಿ ಮಾಹಿತಿ ಪಡೆದರು. ಈ ಭೇಟಿಯಿಂದ ಸಾಕಷ್ಟು ವಿಚಾರಗಳನ್ನು ತಿಳಿಯಲು ಸಾಧ್ಯವಾಯಿತು, ಇದು ಉತ್ತಮ ಕಾರ್ಯವಾಗಿದ್ದು, ಅವಕಾಶ ಮಾಡಿಕೊಟ್ಟಿದ್ದಕ್ಕೆ ವಿಜಯವಾಣಿ ಬಳಗಕ್ಕೆ ವಿದ್ಯಾರ್ಥಿಗಳು ಹಾಗೂ ಸಂಚಾಲಕರು ಕೃತಜ್ಞತೆ ತಿಳಿಸಿದರು. ಕನ್ನಡದ ನಂ.1 ಪತ್ರಿಕೆ ವಿಜಯವಾಣಿ ಮಾಧ್ಯಮ ಕಚೇರಿ ವೀಕ್ಷಣೆಗೆ ವಿದ್ಯಾನಿಕೇತನ ಪದವಿ ವಿದ್ಯಾರ್ಥಿಗಳು ಉತ್ಸುಕತೆ ತೋರಿದ ಹಿನ್ನೆಲೆಯಲ್ಲಿ ಭೇಟಿ ಆಯೋಜಿಸಲಾಗಿತ್ತು.

ನಿತ್ಯವೂ ಪತ್ರಿಕೆ ಓದುತ್ತಿದ್ದೆವು. ಆದರೆ, ತಯಾರಾಗುವ ಬಗ್ಗೆ ಕುತೂಹಲವಿತ್ತು. ಕಚೇರಿ ಸಿಬ್ಬಂದಿ ಪ್ರತಿಯೊಂದನ್ನು ವಿವರಿಸಿದ್ದು ಮರೆಯಲಾರದ ಕ್ಷಣ. ವಿಷಯ ಸಂಗ್ರಹ ರೀತಿ, ಪ್ರಿಂಟ್ ಆಗುವ ಬಗ್ಗೆ ಮಾಹಿತಿಯಿರಲಿಲ್ಲ. ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದ ವಿಜಯವಾಣಿ ತಂಡಕ್ಕೆ ಧನ್ಯವಾದಗಳು. ಶರಣಬಸಪ್ಪ ಮಾಚಾಲಿ ವಾಣಿಜ್ಯ ವಿಭಾಗದ ಸಂಚಾಲಕ ಅಧುನಿಕ ತಂತ್ರಜ್ಞಾನಗಳ ನಡುವೆಯೂ ಮುದ್ರಣ ಮಾಧ್ಯಮ ತನ್ನ ಮೌಲ್ಯ ಹೆಚ್ಚಿಸಿಕೊಂಡಿದ್ದು, ನಿತ್ಯವೂ ಪತ್ರಿಕೆ ಓದಿದಾಗಲೇ ಸಮಾಧಾನ. ಮುದ್ರಣ ಪ್ರತಿಯೊಂದು ಹಂತದ ಮಾಹಿತಿ ನೀಡಿದ ವಿಜಯವಾಣಿ ತಂಡಕ್ಕೆ ಅಭಿನಂದನೆಗಳು. ಪತ್ರಿಕೆಯೊಂದರಲ್ಲಿ ದೇಶ, ವಿದೇಶದ ಪ್ರತಿಯೊಂದು ಮಾಹಿತಿ ಪಡೆಯಬಹುದಾಗಿದೆ. ಅಸ್ತಾ ಸುರಾನಾ ವಿದ್ಯಾರ್ಥಿನಿ ಪತ್ರಿಕೆಗೆ ವಿಷಯಗಳನ್ನು ಹುಡುಕುವ ರೀತಿ ಬಗ್ಗೆ ಕಚೇರಿಗೆ ಭೇಟಿ ನೀಡಿದಾಗ ಗೊತ್ತಾಗಿದೆ. ಇಂಡಸ್ಟ್ರಿಯಲ್ ವಿಸಿಟ್ ಕಾರ್ಯಕ್ರಮದಡಿ ಭೇಟಿ ನೀಡಲಾಗಿತ್ತು. ಇಂಟರ್‌ನೆಟ್‌ನಲ್ಲೂ ಪತ್ರಿಕೆ ಓದುವುದರ ಬಗ್ಗೆಯೂ ಗೊತ್ತಾಯಿತು. ಮುದ್ರಣದ ಇಂಚಿಂಚೂ ಮಾಹಿತಿ ನೀಡಿದ ವಿಜಯವಾಣಿ ಬಳಗಕ್ಕೆ ಧನ್ಯವಾದ. ಆಮಾನ್ ವಿದ್ಯಾರ್ಥಿ ಪತ್ರಿಕೆ ಮತ್ತು ಪತ್ರಿಕೆ ಓದುವುದರ ಬಗ್ಗೆ ಗೊತ್ತಿದ್ದರೂ ಯಾವ ರೀತಿಯಲ್ಲಿ ಮುದ್ರಣವಾಗುತ್ತೆ ಅನ್ನೊಂದು ಗೊತ್ತಿರಲಿಲ್ಲ. ವಿಷಯ ಹುಡುಕುವ ರೀತಿ, ಸುದ್ದಿರೂಪದಲ್ಲಿ ಕೊಡುವುದು, ಮುದ್ರಣದ ತಾಂತ್ರಿಕತೆ ಮತ್ತು ಜಾಹೀರಾತು ಬಗ್ಗೆ ಗೊತ್ತಾಗಿದೆ. ಕುಸುಮಾ ವಿದ್ಯಾರ್ಥಿನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net