ಪ್ರಾಂಶುಪಾಲರ ಆತ್ಮಹತ್ಯೆ ಸಿಬಿಐ ತನಿಖೆಯಾಗಲಿ

doddanagowda new
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ
Published on

ಬಾಗಲಕೋಟೆ: ಇತ್ತೀಚೆಗೆ ಹುನಗುಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಗರಾಜ ಮುದಗಲ್ಲ ಕಾಲೇಜಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಗ್ಗೆ ಕುಟುಂಬದವರು ಸಂಶಯ ವ್ಯಕ್ತಪಡಿಸುತ್ತಿದ್ದು, ಈ ಬಗ್ಗೆ ಸರ್ಕಾರ ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಹುನಗುಂದ ಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆಗ್ರಹಿಸಿದ್ದಾರೆ.

ಇಳಕಲ್ಲದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಂಶುಪಾಲರು ಆತ್ಮಹತ್ಯೆ ಮಾಡಿಕೊಳ್ಳಲು ಯಾವುದೇ ಸಮಸ್ಯೆ ಇರಲಿಲ್ಲ. ಇತ್ತೀಚೆಗೆ ಅವರ ಪುತ್ರನಿಗೆ ಎಂಬಿಬಿಎಸ್ ಸೀಟ್ ಸಿಕ್ಕಿದ್ದು, ದುಡ್ಡು ಕಟ್ಟಿ ಪ್ರವೇಶ ಕೊಡಿಸಿ ಬಂದಿದ್ದಾರೆ. ಡಿಸೆಂಬರ್‌ನಲ್ಲಿ ಪುತ್ರಿಯ ಮದುವೆ ನಿಶ್ಚಯವಾಗಿತ್ತು. ಇಂತಹ ಸಂಭ್ರಮದ ಕುಟುಂಬದ ಮುಖ್ಯಸ್ಥ ಕಾಲೇಜಿನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಕುಟುಂಬದವರು ಸಂಶಯ ವ್ಯಕ್ತಪಡಿಸುತ್ತಿದ್ದು, ಈ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸಿದರು.

ಆ. 22 ರಂದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಾಂಶುಪಾಲ ಅವರು ಅಂದು ಕಾಲೇಜಿನಲ್ಲಿ ಕಾರ್ಯಕ್ರಮ ಇತ್ತು. ಅವರ ಆತ್ಮಹತ್ಯೆಯ ಹಿಂದೆ ಏನೋ ವ್ಯವಹಾರ ಕಾರಣ ಇರಬಹುದು. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡುತ್ತಿದ್ದೇನೆ ಎಂದರು.

ಹುನಗುಂದ ಕ್ಷೇತ್ರಕ್ಕೆ ಪ್ರತ್ಯೇಕ ಇಲಾಖೆಗಳು
ಹುನಗುಂದ ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆ ಹೆಚ್ಚಾಗಿವೆ. ಈ ಮೂರು ತಿಂಗಳು ಇವರು (ಕ್ಷೇತ್ರದ ಶಾಸಕರು) ಜನರ ಸೇವೆ ಮಾಡುತ್ತಾರೋ ಅಥವಾ ಲೂಟಿ ಹೊಡೆಯುತ್ತಾರೋ ನೋಡೋಣ ಎಂದು ನಾನು ಏನನ್ನೂ ಮಾತನಾಡಿರಲಿಲ್ಲ. ಈಗ ಪರಿಸ್ಥಿತಿ ಗಂಭೀರವಾಗಿದೆ. ಆಡಳಿತ ಕುಸಿದು ಜನರು ಸಂಕಷ್ಟದಲ್ಲಿದ್ದಾರೆ. ಹುನಗುಂದ ಕ್ಷೇತ್ರದಲ್ಲಿ ಅವರದ್ದೇ ಆದ ಪೊಲೀಸ್ ಠಾಣೆ, ವಸೂಲಿ ಇಲಾಖೆ ಸೇರಿ ಬೇರೆ ಬೇರೆ ಇವೆ. ಅದಕ್ಕೆ ಒಬ್ಬೊಬ್ಬರನ್ನು ಹೆಡ್ ಮಾಡಿಕೊಂಡಿದ್ದಾರೆ. ಪೊಲೀಸ್ ಠಾಣೆ ಹಿಂಭಾಗ, ಮುಖ್ಯರಸ್ತೆಯಲ್ಲೆ ಜೂಟಾಟದ ಅಡ್ಡಗಳು ತೆರೆದಿದ್ದರೂ ಪೊಲೀಸರು ಅವುಗಳನ್ನು ತಡೆಯುತ್ತಿಲ್ಲ. ತಡೆಯಲು ಆಗಲ್ಲ ಎಂದು ಲೇವಡಿ ಮಾಡಿದ ಮಾಜಿ ಶಾಸಕ, ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಅವರಿಗೆ ಈ ಬಗ್ಗೆ ಎಚ್ಚರಿಕೆ ನೀಡುತ್ತೇನೆ. ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ಮುಂದುವರಿದರೆ ಇದಕ್ಕೆ ತಾವೂ ಜವಾಬ್ದಾರಿ ಆಗುತ್ತೀರಿ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net