

ನಾಗರಮುನ್ನೋಳಿ: ಸಮೀಪದ ಹಿರೇಕೋಡಿ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆಯಲ್ಲಿ ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾಧಿಕಾರಿ ವಿಜಯಪ್ರಕಾಶ ಪೂಜೇರಿ ನೇತೃತ್ವದಲ್ಲಿ ಸೋಮವಾರ ಪಾಲಕರ ಸಭೆ ನಡೆಯಿತು.
ಈಚೆಗೆ ಮಕ್ಕಳು ಕಲುಷಿತ ಆಹಾರ ಸೇವಿಸಿದ ಪ್ರಕರಣದಲ್ಲಿ ಪ್ರಾಂಶುಪಾಲ ಹಾಗೂ ವಾರ್ಡನ್ ಅವರನ್ನು ಅಮಾನತು ಮಾಡಲಾಗಿದೆ. ಆದರೆ ಅಡುಗೆ ಸಿಬ್ಬಂದಿ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪಾಲಕರು ಪ್ರಶ್ನಿಸಿದರು. ಯಾವುದೇ ಒತ್ತಡಕ್ಕೆ ಮಣಿಯದೆ ಅಡುಗೆ ಸಿಬ್ಬಂದಿಯನ್ನು ವಜಾಗೊಳಿಸಬೇಕು ಮತ್ತು ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಪ್ರಾಂಶುಪಾಲ ಹಾಗೂ ವಾರ್ಡನ್ ಅಮಾನತು ಆದೇಶ ಹಿಂಪಡೆಯಬೇಕು. ಶಾಲೆಯಲ್ಲಿ ಇಂಥ ಘಟನೆ ಆಗದಂತೆ ನಿಗಾವಹಿಸಬೇಕು ಎಂದು ಒತ್ತಾಯಿಸಿದರು.
ಪಾಲಕರ ಮನವಿ ಸ್ವೀಕರಿಸಿ ಮಾತನಾಡಿದ ವಿಜಯಪ್ರಕಾಶ ಪೂಜೇರಿ, ಆದಷ್ಟು ಬೇಗನೆ ಅಡುಗೆ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗುವುದು. ಪ್ರಾಂಶುಪಾಲ ಹಾಗೂ ವಾರ್ಡನ್ ಅಮಾನತು ಆದೇಶ ಹಿಂಪಡೆಯುವಂತೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಪಿಎಸ್‌ಐ ಬಸಗೌಡ ನೇರ್ಲಿ ಮಾತನಾಡಿದರು.
ಪ್ರಭಾರಿ ಪ್ರಾಂಶುಪಾಲ ಸದಾಶಿವ ಘೇವಾರಿ, ಡಾ.ವಿನಯಕುಮಾರ ಪೂಜೇರಿ, ಚನ್ನಮ್ಮ ಕೋಳಚೆ, ಡಾ.ಯಶೋದಾ ಬಬಲಿ, ಡಾ.ಆರ್.ಎನ್.ಮದಿಹಳಿ, ಸಂಜೀವ ಕಾಂಬಳೆ, ಮಾರುತಿ ಮಾಯನ್ನವರ, ತೇಜಶ್ರೀ ಕಾಂಬಳೆ, ಶಾಹಿನ್ ಪಠಾಣ್, ಯಾಸಿನ್ ಅತ್ತಾರ್, ರಾಜು ಪಾಟೀಲ, ಸುರೇಖಾ ಹೆಗಡೆ, ಕಿರಣ ಕಣಗಲೆ, ಸವಿತಾ ಪಾಟೀಲ, ರಾಧಾ ಖೋತ, ಚಿದಾನಂದ ನಾವಿ,ನಾಗರಾಜ ಸಾಂಗಲಿ, ಅಶ್ವಿನಿ ಗೋಟುರೆ ಇತರರಿದ್ದರು.