ಪ.ಪೂ ಶಿಕ್ಷಣ ಇಲಾಖೆ ವಿಲೀನಕ್ಕೆ ಖಂಡನೆ: ನಗರದಲ್ಲಿ ಮಾಜಿ ಎಂಎಲ್‌ಸಿ ಕೆಟಿಎಸ್ ನೇತೃತ್ವದಲ್ಲಿ ಪ್ರತಿಭಟನೆ

Principal lecturers librarians and non-teaching staff Protest mandya
Published on

ಮಂಡ್ಯ: ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಶಾಲಾ ಶಿಕ್ಷಣ ಇಲಾಖೆಯೊಂದಿಗೆ ವಿಲೀನಗೊಳಿಸಿ ‘ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಎಂದು ಹೆಸರು ಬದಲಿಸಿರುವುದನ್ನು ಖಂಡಿಸಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಾಂಶುಪಾಲರ, ಉಪನ್ಯಾಸಕರ, ಗ್ರಂಥಪಾಲಕ ಮತ್ತು ಬೋಧಕೇತರರ ನೌಕರರ ಒಕ್ಕೂಟದ ಅಧ್ಯಕ್ಷರೂ ಆದ ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ನೇತೃತ್ವದಲ್ಲಿ ಡಿಡಿಪಿಯು ಕಚೇರಿಯಿಂದ ಮೆರವಣಿಗೆ ಸಾಗಿ ಎಡಿಸಿ ಡಾ.ಎಚ್.ಎಲ್.ನಾಗರಾಜು ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಅವರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಪಿಯುಸಿ ಹಂತವನ್ನು ಪ್ರೌಢಶಾಲೆಗಳಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಹಿಂದಿನಿಂದಲೂ ನಡೆಯುತ್ತಿದೆ. ಇದನ್ನು ಕೂಡಲೇ ಕೈಬಿಟ್ಟು ಪದವಿ ಪೂರ್ವ ಶಿಕ್ಷಣ ಇಲಾಖೆ ಹೆಸರನ್ನೇ ಮುಂದುವರೆಸಬೇಕು. ಪ್ರತ್ಯೇಕ ಇಲಾಖೆಯೇ ಅದನ್ನು ನಿರ್ವಹಿಸಬೇಕು. ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಹಂತಗಳ ನಡುವೆ ಒಂದು ಸೇತುವಾಗಿ ಗುಣಾತ್ಮಕ ಮತ್ತು ಸ್ಪರ್ಧಾತ್ಮಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ರಾಷ್ಟ್ರದಲ್ಲೇ ಮಾದರಿಯಾದ ಶೈಕ್ಷಣಿಕ ವ್ಯವಸ್ಥೆ ಎಂಬ ಕೀರ್ತಿಗೆ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆ ಪಾತ್ರವಾಗಿದೆ. ಆದರೀಗ ಈ ಇಲಾಖೆಯನ್ನು ವಿಲೀನಗೊಳಿಸುವ ಪ್ರಯತ್ನ ಸರಿಯಲ್ಲ ಎಂದು ಆಕ್ಷೇಪಿಸಿದರು.

ವಿಪರ್ಯಾಸವೆಂದರೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಅಸ್ತಿತ್ವಕ್ಕೆ ತಂದ ಇಲಾಖೆಯನ್ನು ಇದೀಗ ಅವರ ಮಗ ಸಚಿವ ಮಧು ಬಂಗಾರಪ್ಪ ಬರಖಾಸ್ತು ಮಾಡಲು ಹೊರಡಿದ್ದಾರೆ. ಇದು ಸರಿಯಲ್ಲ. ಪದವಿ ಪೂರ್ವ ಶಿಕ್ಷಣ ವ್ಯವಸ್ಥೆಗೆ ಯಾವುದೇ ರಾಜಕೀಯ ಸೋಂಕು ಇರಬಾರದು. ಸ್ಥಳೀಯ ಸಂಸ್ಥೆಗಳಂತಹ (ಜಿಪಂ, ತಾಪಂ) ರಾಜಕೀಯ ವ್ಯವಸ್ಥೆಯು ಮೂಗು ತೂರಿಸಬಾರದು. ಇಲಾಖೆಯ ವಿಲೀನ ಸಂಬಂಧ 2023ರ ಅ.18ರಂದು ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯಬೇಕು. ಡಿಡಿಪಿಯು ಕಚೇರಿಗಳನ್ನು ಬಲಪಡಿಸಬೇಕು. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅಧೀಕ್ಷಕರು, ಎಫ್‌ಡಿಎ, ಎಸ್‌ಡಿಎ ಹಾಗೂ ಗ್ರೂಪ್-ಡಿ ಹುದ್ದೆಗಳನ್ನು ಮಂಜೂರು ಮಾಡಬೇಕು. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಡಿ.1ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಉಪನ್ಯಾಸಕರ ಸಂಘದ ಅಧ್ಯಕ್ಷ ಭೈರೇಶ್, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಹನುಮಂತಯ್ಯ, ಚನ್ನಕೃಷ್ಣಯ್ಯ, ರವೀಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net