

ಯಲಬುರ್ಗಾ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕಲಬುರಗಿ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರಕಾಶ ಹೊಸಮನಿ ನೇತೃತ್ವದ ತಂಡ ಸೋಮವಾರ ಕಾಲೇಜಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿತು.
ಕಾಲೇಜಿಗೆ ಸಂಬಂಧಿಸಿದ ವಿವಿಧ ಖಾತೆಗಳಿಂದ ಹಣ ದುರ್ಬಳಕೆ, ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಒದಗಿಸದಿರುವುದು, ಕಡತಗಳ ದುರ್ಬಳಕೆ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ.
ದಾಖಲಾತಿಗಳ ಅಸಮರ್ಪಕ ನಿರ್ವಹಣೆ, ಕಾಲೇಜಿನಲ್ಲಿ ಒಂದೇ ವರ್ಗಕ್ಕೆ ಸಿ, ಡಿ ದರ್ಜೆ ಅರೆಕಾಲಿಕ ಹುದ್ದೆ ನೇಮಕ ಸೇರಿ ವಿವಿಧ ರೀತಿಯ ಆರೋಪ ಇರುವ ಹಿನ್ನೆಲೆಯಲ್ಲಿ ಸುಮಾರು ಗಂಟೆಗಳ ಕಾಲ ಸಿಬ್ಬಂದಿಯಿಂದ ಜಂಟಿ ನಿರ್ದೇಶಕ ಹೊಸಮನಿ ವಿವರಣೆ ಪಡೆದರು. ಬಳಿಕ ಎಲ್ಲ ವರದಿ ಮತ್ತು ದಾಖಲಾತಿ ಪರಿಶೀಲಿಸಿ ಅವ್ಯವಹಾರ ಮತ್ತು ಲೋಪದೋಷಗಳ ಬಗ್ಗೆ ಕಮಿಷನರ್‌ಗೆ ವರದಿ ಸಲ್ಲಿಸಲಾಗುವುದೆಂದು ತಿಳಿಸಿದರು.
ಸಾರ್ವಜನಿಕರಿಂದ ದೂರು: ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ 2018ರಿಂದ 2023ರವರೆಗೆ ಸರ್ಕಾರ ಹಾಗೂ ಕಾಲೇಜು ಶಿಕ್ಷಣ ಇಲಾಖೆಯಿಂದ ಬಂದಿರುವ ಅನುದಾನವನ್ನು ದುರ್ಬಳಕೆ ಆಗಿದೆ ಎಂದು ಆರೋಪಿಸಿದ ಸಾರ್ವಜನಿಕರು, ತಪ್ರಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಜಂಟಿ ನಿರ್ದೇಶಕಗೆ ಪ್ರಮುಖರಾದ ಮಲ್ಲು ಜಕ್ಕಲಿ, ವಿಕಾಸ ಉಳ್ಳಾಗಡ್ಡಿ, ರೆಹಮಾನ್ ನಾಯಕ, ಗವಿಸಿದ್ದಯ್ಯ ಗಂದದ, ಹನಮೇಶ ಗಡಾದ ಸೋಮವಾರ ದೂರು ಸಲ್ಲಿಸಿದರು.
ಯಲಬುರ್ಗಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅನುದಾನ ದುರ್ಬಳಕೆ ಕುರಿತು ಉನ್ನತ ಶಿಕ್ಷಣ ಸಚಿವರಿಗೆ ಸಾರ್ವಜನಿಕರಿಂದ ದೂರು ಸಲ್ಲಿಕೆಯಾಗಿದೆ. ಕಾಲೇಜಿನಲ್ಲಿ ನಡೆದಿರುವ ಅವ್ಯವಹಾರ ಕುರಿತು ಸಚಿವರ ಸೂಚನೆ, ಕಮಿಷನರ್ ಆದೇಶದಂತೆ ದಾಖಲಾತಿಗಳು ಮತ್ತು ಕಡತಗಳನ್ನು ಪರಿಶೀಲಿಸಲಾಗಿದೆ. ವಾಸ್ತವಾಂಶವನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು.ಪ್ರಕಾಶ ಹೊಸಮನಿ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು, ಕಲಬುರಗಿ