

ಹುಬ್ಬಳ್ಳಿ: ಜಗತ್ತಿನ ಸೃಷ್ಟಿಗೂ ಮೊದಲೇ ಭಗವಂತ ಗಣಾಧೀಶ್ವರರನ್ನು ಸೃಷ್ಟಿ ಮಾಡಿದ. ಅವರಿಗೆ ಆಚಾರ್ಯ ದೀಕ್ಷೆಯನ್ನಿತ್ತ. ಅವರಿಂದ ಭೂಲೋಕದಲ್ಲಿ ಪಂಚಸೂತ್ರಗಳ ನೆಲೆಯಲ್ಲಿ ವಿವಿಧ ಋಷಿಗಳಿಗೆ ಬೋಧಿಸಿದ ದರ್ಶನ ಶಾಸ್ತ್ರ ಚಿಂತನೆಯ ವೀರಶೈವ ತತ್ವಜ್ಞಾನವೇ ಭಾರತದ ಆದಿ ತತ್ವಜ್ಞಾನವಾಗಿದೆ ಎಂದು ಕಾಶಿ ಜ್ಞಾನ ಪೀಠದ ಜಗದ್ಗುರು ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಮಹಾರಾಷ್ಟ್ರದ ಸೊಲ್ಲಾಪೂರದಲ್ಲಿ ಶನಿವಾರ ಸಮಾರೋಪಗೊಂಡ ಧರ್ಮ ಜಾಗೃತಿ ಸಮಾವೇಶದಲ್ಲಿ ವಿವಿಧ ಕ್ಷೇತ್ರಗಳ 8 ಜನ ಸಾಧಕರಿಗೆ ಕಾಶಿ ಪೀಠದ ದತ್ತಿ ಪುರಸ್ಕಾರ ಪ್ರದಾನ ಮಾಡಿ ಅವರು ಮಾತನಾಡಿದರು.
ಲೌಕಿಕದ ಅಭ್ಯುದಯ ಜತೆಗೆ ಅಲೌಕಿಕ ನೆಲೆಯ ಮುಕ್ತಿಯ ಸೋಪಾನದ ಮುಕ್ತ ಚಿಂತನೆಯನ್ನು ಹೊಂದಿರುವ ಆಗಮಗಳೇ ಸಂಪೂರ್ಣವಾದ ತತ್ವಜ್ಞಾನ ಉಗ್ಗಡಿಸುತ್ತವೆ. ಯೋಗಾರ್ಥ ಹಾಗೂ ರೂಢಾರ್ಥಗಳಿಂದ ಕೂಡಿದ 28 ಶಿವಾಗಮಗಳ ಸಾರವೇ ವೀರಶೈವ ತತ್ವಜ್ಞಾನವಾಗಿದೆ ಎಂದರು.
ಪರಶಿವ ಪದವನ್ನು ಪಡೆದುಕೊಳ್ಳುವ ವಿಧಾನವನ್ನು ತಿಳಿಸುವುದೇ ಪಡ್ವಿಡಿ ಸೂತ್ರ. ಸಕಲ ಜೀವಿಗಳ ಸೃಷ್ಟಿಯ ಮೂಲವೇ ಆಗಿರುವ ವೃಷ್ಟಿ ಸೂತ್ರ, ಜಗತ್ತಿನ ಆದಿಯಾಗಿರುವ ಈಶ್ವರನ ಸ್ವರೂಪವನ್ನು ನಿರೂಪಿಸುವ ಮೇರು ಬಗೆಯಾದ ಲಂಬನ ಸೂತ್ರ, ಜಗತ್ತಿನ 36 ತತ್ವಗಳೆಂಬ ಮುತ್ತಿನ ಗೊಂಚಲವಾದ ಮುಕ್ತಾಗುಚ್ಛ ಸೂತ್ರ ಹಾಗೂ ಜೀವ ಶಿವನಾಗುವ ಬಗೆಯನ್ನು ವಿವರಿಸುವ ತತ್ವ ಚಿಂತನೆಯೇ ಪಂಚವರ್ಣ ಸೂತ್ರವಾಗಿದೆ. ಈ ಪಂಚಸೂತ್ರಗಳ ಮೂಲ ಆದಿ ದರ್ಶನವನ್ನು ವೀರಶೈವ ತತ್ವಜ್ಞಾನ ಒಳಗೊಂಡಿದೆ ಎಂದು ಹೇಳಿದರು.
ಮಹಾರಾಷ್ಟ್ರ ವಾಸೀಮ ನಗರದ ಡಾ. ವೇದಪ್ರಕಾಶ ಡೋಣಗಾಂವಕರ ಇವರಿಗೆ ಚಂದ್ರಶೇಖರ ಕಪಾಳೆ ಸಾಹಿತ್ಯ ಪುರಸ್ಕಾರ, ಸೊಲ್ಲಾಪುರದ ರಾಜೇಂದ್ರ ಬಲಸುರೆ ಅವರಿಗೆ ವೀರಸಂಗಯ್ಯ ಸ್ವಾಮಿ ಆದರ್ಶ ಶಿಕ್ಷಕ ಪುರಸ್ಕಾರ, ತುಳಜಾಪುರದ ಐಶ್ವರ್ಯಾ ಕುಲಕರ್ಣಿ ಅವರಿಗೆ ಸದಾಶಿವ ಸ್ವಾಮಿ ಪ್ರಜ್ಞಾ ಪುರಸ್ಕಾರ, ಪುಣೆ ನಗರದ ಮಹೇಶ ಸ್ವಾಮಿ ಅವರಿಗೆ ಬಂಡಯ್ಯ ಮಠಪತಿ ಸಮಾಜ ಸೇವಾ ಪುರಸ್ಕಾರ, ಸೊಲ್ಲಾಪುರದ ವ್ಯಾಖ್ಯಾನಕೇಸರಿ ಬಸವರಾಜ ಶಾಸ್ತ್ರಿ ಹಿರೇಮಠ ಅವರಿಗೆ ವಿಠಾಬಾಯಿ ದೇವಪ್ಪ ಪ್ರಸಾರಕರ ಕೃತಜ್ಞತಾ ಪುರಸ್ಕಾರ, ಲಾತೂರದ ಭೀಮಾಶಂಕರ ಮೋತಿಪೌಳೆ ಅವರಿಗೆ ಪರಾಂಡಕರ ಮಹಾರಾಜ ಪತ್ರಕಾರಿಕಾ ಪುರಸ್ಕಾರ, ಸೊಲ್ಲಾಪುರದ ಗುರುನಾಥ ವಠಾರೆ ಅವರಿಗೆ ಸಿದ್ರಾಮಪ್ಪಾ ಗೋಡೆ ನಾಟ್ಯಕರ್ಮಿ ಪುರಸ್ಕಾರ ಹಾಗೂ ಬಾರ್ಸಿ ನಗರದ ಡಾ. ಅನಂತ ಭಾವೂರಾವ ಬಿಡವೆ ಅವರಿಗೆ ಶಾಂತಾಬಾಯಿ ಗಾಯಕವಾಡ ಕೀರ್ತನಕಾರ ಪುರಸ್ಕಾರ ಪ್ರದಾನ ಮಾಡಿ ಉಭಯ ಜಗದ್ಗುರುಗಳು ಆಶೀರ್ವದಿಸಿದರು.
ಕಾಶಿ ಜ್ಞಾನ ಪೀಠದ ಕಿರಿಯ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಸಾನ್ನಿಧ್ಯ ವಹಿಸಿದ್ದರು. ಬಾರ್ಸಿಯ ಶ್ರೀರಾಚಲಿಂಗ ಶಿವಾಚಾರ್ಯರು, ಲಾತೂರಿನ ಶ್ರೀಓಂಕಾರಸಿದ್ಧ ಶಿವಾಚಾರ್ಯರು ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಉತ್ತರಪ್ರದೇಶ ರಾಜ್ಯಗಳ ಭಕ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.