ರಾಜಕೀಯ ಭಾಷಣದ ನಡುವೆಯೂ ಎತ್ತಿನಹೊಳೆ, ಭದ್ರಾಮೇಲ್ದಂಡೆ ಪ್ರಸ್ತಾಪಿಸಿದ ಮೋದಿ

Modi_local_Web
Published on

ತುಮಕೂರು: ರಾಜಕೀಯ ವಿರೋಧಿಗಳ ಕಾಲೆಳೆಯಲು ಚುನಾವಣಾ ಪ್ರಚಾರ ಭಾಷಣದಲ್ಲಿ ಹೆಚ್ಚು ಸಮಯ ಮೀಸಲಿಡುವ ಬದಲು ಪ್ರಧಾನಿ ನರೇಂದ್ರ ಮೋದಿ ಅವರು ಎತ್ತಿನಹೊಳೆ, ಭದ್ರಾಮೇಲ್ದಂಡೆ, ಫುಡ್‌ಪಾರ್ಕ್, ಎಚ್‌ಎಎಲ್ ಹೆಲಿಕ್ಯಾಪ್ಟರ್ ಘಟಕ, ಸ್ಮಾರ್ಟ್‌ಸಿಟಿಯಂತಹ ಸ್ಥಳೀಯ ವಿಷಯ ಪ್ರಸ್ತಾಪಿಸುವ ಮೂಲಕ ಜಿಲ್ಲೆಯ ಜನರ ಮನಗೆದ್ದರಲ್ಲದೆ, ಕಾಂಗ್ರೆಸ್, ಜೆಡಿಎಸ್ ಪಕ್ಷವನ್ನು ಚಿವುಟಿದರು.

ತುಮಕೂರಿನಲ್ಲಿ ಫುಡ್‌ಪಾರ್ಕ್ ಸ್ಥಾಪಿಸುವ ಮೂಲಕ ರೈತರ ನೆರವಿಗೆ ಧಾವಿಸಲಾಯಿತು. ಜತೆಗೆ ರೈತರಿಗೆ ಮಾರುಕಟ್ಟೆ ಒದಗಿಸಲಾಯಿತು. ಅಲ್ಲದೆ, ಯುವಕರಿಗೆ ಉದ್ಯೋಗಿಗಳಿಗೆ ಕೆಲಸ ಸಿಕ್ಕಿತು ಎಂದು ತಮ್ಮ ಸರ್ಕಾರದ ಸಾಧನೆಯನ್ನು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲೆಯ 11 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಚುನಾವಣಾ ಪ್ರಚಾರದ ವೇಳೆ ಶುಕ್ರವಾರ ಜನರ ಮುಂದಿಟ್ಟರು.

ಜಿಲ್ಲೆಯ ಯುವಜನತೆಗೆ ಉದ್ಯೋಗ ಕಲ್ಪಿಸಲು ಎಚ್‌ಎಎಲ್ ಘಟಕ ಆರಂಭಿಸಲಾಗಿದೆ, ಇದರಿಂದ ಸಹಸ್ರಾರು ಉದ್ಯೋಗ ಸೃಷ್ಟಿಯಾಗಲಿವೆ. ತುಮಕೂರು ಜಿಲ್ಲೆಯನ್ನು ಕಲ್ಪತರು ನಾಡು ಎನ್ನಲಾಗುತ್ತದೆ. ತೆಂಗು ಇಲ್ಲಿನ ಪ್ರಮುಖ ಬೆಳೆಯಾಗಿದ್ದು ಪ್ರಕೃತಿವಿಕೋಪದಿಂದ ತೆಂಗು ಬೆಳೆ ನೆಲೆಕಚ್ಚಿದೆ. ಈ ಸಂಕಷ್ಟದಲ್ಲಿ ರೈತರ ಜತೆ ಸರ್ಕಾರ ನಿಲ್ಲಬೇಕು. ಹಾಗಾಗಿ, ಕೊಬ್ಬರಿಗೆ ಕನಿಷ್ಟ ಬೆಂಬಲ ಬೆಲೆ ಹೆಚ್ಚಿಸಿದ್ದು ನಮ್ಮ ಸರ್ಕಾರ ಎಂದರು.

ಎಲ್ಲಾ ಮನೆಗಳಿಗೂ ಶುದ್ಧ ಕಡಿಯುವ ನೀರು ಪೂರೈಸಬೇಕೆಂಬ ನಮ್ಮ ಸಂಕಲ್ಪ ಸಾಕಾರವಾಗುತ್ತಿದೆ, ಎಲ್ಲಾ ಮನೆಗಳಿಗೂ ನೀರು ಪೂರೈಸುವ ಜಲ್ ಜೀವನ್ ಮಿಷನ್ ಯೋಜನೆ ದೇಶವ್ಯಾಪ್ತಿ ನಡೆಯುತ್ತಿದೆ ಎಂದರು.

ಭಾಷಣದ ಆರಂಭದಲ್ಲಿಯೇ ಶ್ರೀ ಸಿದ್ಧಗಂಗಾ ಹಾಗೂ ಶ್ರೀಆದಿಚುಂಚನಗಿರಿ ಮಠಗಳನ್ನು ಸ್ಮರಿಸುವ ಮೂಲಕ ಪ್ರಧಾನಿ ನರೇಂದ್ರಮೋದಿ ಜನರ ಮನಗೆದ್ದರು, ಡಾ.ಶಿವಕುಮಾರಸ್ವಾಮೀಜಿ ಅವರ ತ್ರಿವಿಧ ದಾಸೋಹ ಕಾಯಕ ನಮ್ಮ ಸರ್ಕಾರಕ್ಕೂ ಪ್ರೇರಣೆ ಎಂದು ಸ್ಮರಿಸಿದರು.

=-==

ಎತ್ತಿನಹೊಳೆ ಯೋಜನೆ, ಭದ್ರಮೇಲ್ದಂಡೆ ನೀರಾವರಿ ಯೋಜನೆಗಳಿಗೆ ಬಿಜೆಪಿ ಸರ್ಕಾರ ಹೆಚ್ಚು ಅನುದಾನ ನೀಡಿದೆ. ತುಮಕೂರು ರಾಯದುರ್ಗ, ತುಮಕೂರು ದಾವಣಗೆರೆ ರೈಲ್ವೆ ಯೋಜನೆಗಳೂ ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು.

ನರೇಂದ್ರ ಮೋದಿ

ಪ್ರಧಾನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net