

ಆಲೂರು: ಗ್ರಾಮೀಣ ಜನತೆಯ ಮನೆ ಮನೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಜಲ ಜೀವನ್ ಮಿಷನ್ ಯೋಜನೆಯಡಿ ನನಸು ಮಾಡಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ತಾಲೂಕಿನ ಚನ್ನಾಪುರ ಮತ್ತು ಹಂಚೂರು ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನ ಯಡೆಹಳ್ಳಿ ನಂಜಾಪುರ ಗ್ರಾಮದ ಸುಮಾರು 290 ಮನೆಗಳಿಗೆ, ಕುಂದೂರು ಹೋಬಳಿ ಚನ್ನಾಪುರ ಗ್ರಾಮದ ಸುಮಾರು 280 ಮನೆಗಳಿಗೆ, ಹಂಚೂರು ಗ್ರಾಮದ ಸುಮಾರು 207 ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಜೆಜೆಎಮ್ ಯೋಜನೆಯಡಿ ಒದಗಿಸಲಾಗುತ್ತಿದೆ. ಈ ಯೋಜನೆಗಳ ಕಾಮಗಾರಿಯನ್ನು ಪಡೆದ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸುವುದರ ಜತೆಗೆ ತ್ವರಿತಗತಿಯಲ್ಲಿ ಕೆಲಸವನ್ನು ಮುಗಿಸಿಕೊಡಬೇಕು ಎಂದು ಸೂಚಿಸಿದರು.
ಗ್ರಾಮೀಣ ಭಾಗದ ಮಹಿಳೆಯರು ಕುಡಿಯುವ ನೀರನ್ನು ವಿವಿಧ ಜಲಮೂಲಗಳಿಂದ ಕಿಲೋ ಮೀಟರ್‌ಗಟ್ಟಲೇ ಹೊತ್ತು ತರುವ ಪಜೀತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೂರ ಮಾಡಿದ್ದು, ಮನೆ ಮನೆಗೆ ನಲ್ಲಿ ಸೌಲಭ್ಯ ನೀಡಿದ್ದಾರೆ. ರಾಜ್ಯದಲ್ಲಿ ಬರದ ಛಾಯೆ ಆರಂಭವಾಗಿದ್ದು, ಕುಡಿಯುವ ನೀರಿಗಾಗಿ ಹಾಹಾಕಾರ ತಲೆದೋರಿದೆ. ಅಲ್ಲದೆ, ಅಂತರ್ಜಲ ಮಟ್ಟ ಕಡಿಮೆಯಾಗಿವುದರಿಂದ ಕೆಲವೊಂದು ಬೋರ್‌ವೆಲ್‌ಗಳಲ್ಲಿ ಜಲ ಬತ್ತಿಹೋಗಿದೆ. ಇಂತಹ ಪರಿಸ್ಥಿತಿಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗಮನಹರಿಸಿ ಪ್ರತಿಯೊಂದು ಗ್ರಾಮಕ್ಕೂ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ ಎಂದು ಪಿಡಿಒಗಳಿಗೆ ಸೂಚಿಸಿದರು.
ಹಂಚೂರು ಗ್ರಾಮಸ್ಥರು ಹಲವಾರು ವರ್ಷಗಳಿಂದ ಗ್ರಾಮದಲ್ಲಿ ಪಶು ಆಸ್ಪತ್ರೆಯಿದ್ದು, ಪಶು ವೈದ್ಯರು ಬಾರದಿರುವುದು. ಜಾನುವಾರುಗಳ ಆರೋಗ್ಯ ಸ್ಥಿತಿ ತಿಳಿದುಕೊಳ್ಳಲಾಗುತ್ತಿಲ್ಲ. ವೈದ್ಯರನ್ನು ನೇಮಕ ಮಾಡಿಕೊಡುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಶಾಸಕ ಸಿಮೆಂಟ್ ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ವಾರಕ್ಕೆ ಒಂದು ಬಾರಿಯಾದರೂ ಆಸ್ಪತ್ರೆಗೆ ವೈದ್ಯರು ಬಂದು ಹೋಗುವಂತೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಗ್ರಾಮದ ರಸ್ತೆಯನ್ನು ಸರಿಪಡಿಸುವಂತೆ ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಶಾಸಕರು ಶೀಘ್ರವೇ ರಸ್ತೆ ಕಾಮಗಾರಿಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪೂವಯ್ಯ, ಕಾರಗೋಡು ಗ್ರಾಪಂ ಅಧ್ಯಕ್ಷ ಮಂಜೇಗೌಡ, ಬಿಜೆಪಿ ಮುಖಂಡರಾದ ಕಟ್ಟೆಗದ್ದೆ ನಾಗರಾಜು, ಲೋಹಿತ್‌ಕುಮಾರ್, ಅಜಿತ್ ಚಿಕ್ಕಕಣಗಾಲು, ಲೊಕೇಶ್ ಕಣಗಾಲ್, ಹನುಮಂತೇಗೌಡ, ಪಿಡಿಒ ಸಣ್ಣಪ್ಪ, ಮಗ್ಗೆ ಪಿಡಿಒ ಪರಮೇಶ್, ಕುಂದೂರು ಪಂಚಾಯಿತಿ ಅಧ್ಯಕ್ಷೆ ಶೈಲಜಾ, ಮಾಜಿ ಅಧ್ಯಕ್ಷ ವಿಕಾಸ್, ಸದಸ್ಯ ರವೀಂದ್ರ, ಪಿಡಿಒ ರಮ್ಯಾ, ,ಹಂಚೂರು ಪಂಚಾಯಿತಿ ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ಮಂಜೇಗೌಡ, ಕರುಣ, ಶರಣ್, ಚಂದ್ರಶೇಖರ್, ಷಣ್ಮುಖಪ್ಪ, ಪಿಡಿಒ ಸವಿತಾ ಮುಂತಾದವರು ಉಪಸ್ಥಿತರಿದ್ದರು.