

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಏ.14ರಂದು ನಗರಕ್ಕೆ ಆಗಮಿಸಿ ಬಹಿರಂಗ ಮತ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲ ಬಾರಿಗೆ ಪ್ರಧಾನಿ ಮೋದಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವೇದಿಕೆ ಹಂಚಿಕೊಳ್ಳುವ ಸಾಧ್ಯತೆ ಇದೆ.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಏ.14ರಂದು ಸಂಜೆ 4ಕ್ಕೆ ನಡೆಯುವ ಬಹಿರಂಗ ಮತಪ್ರಚಾರ ಸಮಾವೇಶದಲ್ಲಿ ಪ್ರಧಾನಿ ಭಾಗಿಯಾಗಲಿರುವ ಹಿನ್ನೆಲೆಯಲ್ಲಿ ವಿಶೇಷ ರಕ್ಷಣಾ ದಳದ (ಎಸ್‌ಪಿಜಿ) ಅಧಿಕಾರಿಗಳು ಗುರುವಾರ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಲೋಕಸಭಾ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಈ ಸಮಾವೇಶ ಆಯೋಜನೆ ಮಾಡಲಾಗುತ್ತಿದೆ. ಮೈಸೂರು, ಕೊಡಗು. ಚಾಮರಾಜನಗರ, ಮಂಡ್ಯ ಜಿಲ್ಲೆಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದು, 1 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ಮೋದಿ ಮತಯಾಚನೆ ಮಾಡಲಿದ್ದಾರೆ.
ಮೋದಿ ಆಗಮನದ ಹಿನ್ನೆಲೆಯಲ್ಲಿ ಎಸ್‌ಪಿಜಿ ಅಧಿಕಾರಿಗಳು ನಗರಕ್ಕೆ ದೌಡಾಯಿಸಿದರು. ಪ್ರಧಾನಿ ಅವರು ಕುಳಿತುಕೊಳ್ಳುವ ವೇದಿಕೆ, ಪ್ರಧಾನಿ ವೇದಿಕೆಗೆ ಬರಲು ಪ್ರತ್ಯೇಕ ದ್ವಾರ, ವಿಶ್ರಾಂತಿ ಕೊಠಡಿ, ಮುಖ್ಯ ವೇದಿಕೆಗೂ, ಪಕ್ಷದ ಮುಖಂಡರು ಕುಳಿತುಕೊಳ್ಳುವ ಸ್ಥಳಕ್ಕೂ ಇರಬೇಕಾದ ಅಂತರ ಸೇರಿದಂತೆ ಇನ್ನಿತರ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪರಿಶೀಲನೆ ನಡೆಸಿದರು.
ಜತೆಗೆ, ಹಿರಿಯ ಅಧಿಕಾರಿಗಳೊಂದಿಗೆ ಮೊಬೈಲ್ ಮೂಲಕವೇ ಮಾಹಿತಿ ನೀಡಿ, ವೇದಿಕೆ ನಿರ್ಮಾಣ ಕಾರ್ಯದ ಮಾಹಿತಿ ನೀಡಿದರು. ಬಳಿಕ ಪ್ರಧಾನಿ ಅವರು ಆಗಮಿಸುವ ಹೆಲಿಕಾಪ್ಟರ್‌ನ ಲ್ಯಾಂಡ್ ಆಗುವ ಸ್ಥಳವನ್ನು ವೀಕ್ಷಿಸಿದರು. ಏ.13ರಂದು ಎಸ್‌ಪಿಜಿ ಅಧಿಕಾರಿಗಳ ಮತ್ತೊಂದು ತಂಡ ಆಗಮಿಸಲಿದ್ದು, ಪೂರ್ಣ ಪ್ರಮಾಣದ ಪರಿಶೀಲನೆ ನಡೆಸಿ, ವೇದಿಕೆಯಲ್ಲಿ ಯಾವುದಾದರೂ ಮಾರ್ಪಾಡು ಮಾಡಬೇಕಾದರೆ ನಿರ್ದೇಶನ ನೀಡಲಿದೆ ಎಂದು ಮೂಲಗಳು ತಿಳಿಸಿವೆ.